ನ್ಯೂಸ್

ಚರಂಡಿಗೆ ಬಿದ್ದು ಮಗು ಮೃತ್ಯು! ಸಿಸಿಟಿವಿಯಲ್ಲಿ ಸೆರೆಯಾಯ್ತು ಸಾವಿನ ಹಿಂದಿದ್ದ ಅಸಲಿ ಸಂಗತಿ

ಮಹಾರಾಷ್ಟ್ರ: ಹೃದಯ ವಿದ್ರಾವಕ ಘಟನೆಯೊಂದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪ್ರಾಪ್ತನೊಬ್ಬ 4 ವರ್ಷದ ಮಗುವನ್ನು ಚರಂಡಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಚರಂಡಿಗೆ ಬಿದ್ದ ಬೆನ್ನಲ್ಲೇ ಮಗು ನೀರಿನಲ್ಲಿ ಮುಳುಗಿದ್ದು, ಸಹಾಯ ಸಿಗದೆ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ವರದಿಯಾಗಿದೆ.

ಮೃತ ಮಗುವನ್ನು ಹಸನ್ ಮಲಿಕ್ ಹುಸೇನ್ ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೃತ್ಯ ಎಸಗಿದ ಬಳಿಕ ಬಾಲಕ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.

ಮಾರ್ಚ್ 5ರಂದು ನಾಸಿಕ್‌ನ ದಾತರ್‌ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕ ಸುಧಾರಣಾ ಗೃಹದಲ್ಲಿ ವಾಸಿಸುತ್ತಿದ್ದು, ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಎಂದು ವರದಿಯಾಗಿದೆ. ಸ್ಥಳದಿಂದ ಓಡಿಹೋಗುವ ಮೊದಲು ಮಗುವನ್ನು ಚರಂಡಿಗೆ ಎಸೆದಿರುವುದು ವಿಡಿಯೋ ಮೂಲಕ ದೃಢವಾಗಿದೆ.

ಈ ಘಟನೆಯ ಬೆನ್ನಲ್ಲೇ ಪವಾರವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).