ನವದೆಹಲಿ: ಹಮಾಸ್ ಉಗ್ರರ ಮೇಲೆ ಇಸ್ರೇಲ್ ಯುದ್ಧ ಸಾರಿ ಒಂದು ತಿಂಗಳಾಗಿದ್ದು, ಗಾಜಾದ ಜನರ ಜೀವನ ಈಗ ನರಕವಾಗಿದೆ. ನಿರಾಶ್ರಿತರ ಕೇಂದ್ರಗಳು ತುಂಬಿ ತುಳುಕುತ್ತಿದ್ದು ಆಹಾರ ಸಹಿತ ಆವಶ್ಯಕ ವಸ್ತುಗಳಿಗೆ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಗಾಜಾದಲ್ಲಿ ಪ್ರಸ್ತುತ ಇರುವ ನಿರಾಶ್ರಿತರ ಕೇಂದ್ರಗಳಲ್ಲಿ ಅಂದಾಜು 50,000 ಜನರಿಗೆ ಕೇವಲ ನಾಲ್ಕು ಶೌಚಗೃಹಗಳಿದ್ದು, ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿ ಕೆಲಸ ಮಾಡಿ ಅಮೆರಿಕಕ್ಕೆ ಮರಳಿರುವ ಎಂಎಸ್ಎಫ್ನ ಮ್ಯಾನೇಜರ್ ಎಮಿಲಿ ಕಾಲ್ಹನ್ ವಿವರಿಸಿದ್ದಾರೆ. ದಿನಕ್ಕೆ ಕೇವಲ ನಾಲ್ಕು ಗಂಟೆ ನೀರಿನ ಸರಬರಾಜು ಮಾಡಲಾಗುತ್ತಿದೆ. ಬಹುತೇಕ ನಿರಾಶ್ರಿತರ ಕೇಂದ್ರಗಳು ಈಗಾಗಲೇ ಇಸ್ರೇಲ್ ದಾಳಿಯಿಂದ ಜಖಂಗೊಂಡಿವೆ. ಸಾವಿರಾರು ಗಾಯಾಳುಗಳೂ ಕೇಂದ್ರದಲ್ಲಿ ಇದ್ದಾರೆ. ರೋಗಿಗಳು ಮತ್ತು ವೃದ್ಧರ ಸಮಸ್ಯೆ ಹೇಳತೀರದು ಎಂದು ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ರೆಡ್ ಕ್ರಾಸ್ ತಂಡದ ಮೇಲೆ ದಾಳಿ: ಜೀವರಕ್ಷಕ ಔಷಧಗಳನ್ನು ಒಯ್ಯುತ್ತಿದ್ದ ರೆಡ್ ಕ್ರಾಸ್ ತಂಡವೊಂದು ಗಾಜಾ ಪಟ್ಟಣದಲ್ಲಿ ದಾಳಿಗೆ ಒಳಗಾಗಿದೆ. ಎರಡು ಟ್ರಕ್ಗಳಿಗೆ ಹಾನಿಯಾಗಿದ್ದು ಒಬ್ಬ ಚಾಲಕ ಗಾಯಗೊಂಡಿದ್ದಾನೆ. ಆದರೆ ಈ ದಾಳಿ ಯಾರಿಂದ ನಡೆಯಿತು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.
ವೈದ್ಯರ ಕುಟುಂಬ ಬಲಿ
ನಿರಾಶ್ರಿತರ ಶಿಬಿರದ ಮೇಲಿನ ಬಾಂಬ್ ದಾಳಿಯಿಂದ ತನ್ನ ಒಬ್ಬ ಸದಸ್ಯ ಹಾಗೂ ಅವರ ಕುಟುಂಬದ ಅನೇಕರು ಮೃತಪಟ್ಟರೆಂದು ವೈದ್ಯಕೀಯ ಸೇವಾ ಸಂಸ್ಥೆಯಾದ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್ಎಫ್) ಹೇಳಿದೆ. ಬರ್ಬರ ಬಾಂಬ್ ದಾಳಿಗಳಿಂದಾಗಿ ಗಾಜಾದ ಯಾವ ಜಾಗವೂ ಸುರಕ್ಷಿತವಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ಎಂಎಸ್ಎಫ್ ಅಭಿಪ್ರಾಯಪಟ್ಟಿದೆ.
ಉಗ್ರರಿಗೆ ಎಚ್ಚರಿಕೆ
ಹಮಾಸ್-ಇಸ್ರೇಲ್ ಯುದ್ಧದಲ್ಲಿ ಭಾಗವಹಿಸುವ ದುಸ್ಸಾಹಸಕ್ಕೆ ಇಳಿಯಬೇಡಿ ಎಂದು ಇರಾನ್ ಬೆಂಬಲಿತ ಪ್ಯಾಲೆಸ್ತೀನ್ನ ಹೆಜ್ಬೊಲ್ಲಾ ಸಂಘಟನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಯುದ್ಧವನ್ನು ಸೇರಿಕೊಂಡರೆ ಅದು ದೊಡ್ಡ ತಪ್ಪಾಗುತ್ತದೆ ಎಂದು ಟಿವಿ ಭಾಷಣದಲ್ಲಿ ಹೇಳಿದ್ದಾರೆ.
ಸುರಂಗದಲ್ಲಿ ಉಗ್ರರ ಬೇಟೆ
ಗಾಜಾ ಪಟ್ಟಣದ ಹೃದಯ ಭಾಗವನ್ನು ಪ್ರವೇಶಿಸಿರುವ ಇಸ್ರೇಲಿ ಸೈನಿಕರು ಅಲ್ಲಿರುವ ಸುರಂಗಗಳಿಗೆ ಲಗ್ಗೆಯಿಟ್ಟು ಉಗ್ರಗಾಮಿಗಳನ್ನು ಸದೆಬಡಿಯಲು ಆರಂಭಿಸಿದ್ದಾರೆ. ಈ ನಡುವೆ, ಎರಡು ಪ್ರತ್ಯೇಕ ದಾಳಿಗಳಲ್ಲಿ ಹಮಾಸ್ನ ಪ್ರಮುಖ ಶಸ್ತ್ರಾಸ್ತ್ರ ತಯಾರಕ ಮಹ್ಸೇನ್ ಅಬು ಝಿನಾ ಮತ್ತು ಅನೇಕ ಹೋರಾಟಗಾರರನ್ನು ಹತ್ಯೆಗೈದಿರುವುದಾಗಿ ಇಸ್ರೇಲ್ ಬುಧವಾರ ತಿಳಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಹಠಾತ್ ದಾಳಿ ನಡೆಸುವ ಮೂಲಕ ಸಂಘರ್ಷದ ಕಿಚ್ಚು ಹೊತ್ತಿಕೊಂಡಿತ್ತು. ಪ್ಯಾಲೆಸ್ತೀನಿ ಪ್ರದೇಶದ ಕೆಳಗಡೆ ಇರುವ ಉಗ್ರಗಾಮಿಗಳ ಸುರಂಗ ಜಾಲವನ್ನು ಟಾರ್ಗೆಟ್ ಮಾಡಿ ಇಸ್ರೇಲ್, ವಾಯು ಹಾಗೂ ಭೂ ದಾಳಿಯನ್ನು ತೀವ್ರಗೊಳಿಸಿದೆ. ಹಮಾಸ್ ಉಗ್ರಗಾಮಿ ಸಂಘಟನೆಯ ಪ್ರಮುಖ ಭದ್ರ ಕೋಟೆಯಾದ ಗಾಜಾ ನಗರವನ್ನು ಇಸ್ರೇಲಿ ಪಡೆಗಳು ಸುತ್ತುವರಿದಿವೆ. ನಗರದ ಹೃದಯ ಭಾಗದತ್ತ ಪಡೆಗಳು ಮುನ್ನುಗ್ಗಿವೆ ಎಂದು ಮಿಲಿಟರಿ ಹೇಳಿದೆ. ಗಾಜಾ ಪಟ್ಟಣದ ನೆಲದಡಿ ಇರುವ ನೂರಾರು ಕಿಲೋಮೀಟರ್ ವ್ಯಾಪ್ತಿಯ ಸುರಂಗ ಜಾಲವನ್ನು ನಾಶಪಡಿಸಲು ಮಿಲಿಟರಿಯ ಇಂಜಿನಿಯರಿಂಗ್ ದಳದವರು ಭಾರಿ ಸ್ಪೋಟಕಗಳನ್ನು ಬಳಸುತ್ತಿದ್ದಾರೆಂದು ಅದರ ವಕ್ತಾರರು ತಿಳಿಸಿದ್ದಾರೆ.