ಝಾನ್ಸಿ: ಮಾರುಕಟ್ಟೆಯ ಕಟ್ಟಡವೊಂದರಲ್ಲಿ ಏಕಾ-ಏಕಿ ಬೆಂಕಿ ಕಾಣಿಸಿಕೊಂಡು ಓರ್ವ ಮಹಿಳೆ ಸೇರಿದಂತೆ ನಾಲ್ವರು ಸಜೀವ ದಹನವಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಶೋರೂಮ್ವೊಂದರಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರ ಗುರುತು ಇನ್ನು ಪತ್ತೆಯಾಗಿಲ್ಲ. ಸಿಪ್ರಿ ಬಜಾರ್‌ನ ವಿಆರ್ ಟ್ರೇಡರ್ಸ್ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಶೋ ರೂಮ್ನ ಮೊದಲ ಮಹಡಿಯಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದಲ್ಲೇ ಬೆಂಕಿಯು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಎಸಿ, ಟಿವಿ, ಫ್ರಿಡ್ಜ್, ಮೊಬೈಲ್ ಸೇರಿದಂತೆ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ನಂತರ ಬೆಂಕಿಯು ಎರಡನೇ ಮಹಡಿಯನ್ನು ತಲುಪಿ ಕಾಲ್ತುಳಿತ ಉಂಟಾಗಿದೆ.
ಈ ವೇಳೆ ಕೆಲವರು ಪ್ರಾಣ ಉಳಿಸಿಕೊಳ್ಳಲು ಎರಡನೇ ಮಹಡಿಯಿಂದ ಜಿಗಿದಿದ್ದಾರೆ. ಇದರ ಪರಿಣಾಮವಾಗಿ ಇಬ್ಬರು ಗಾಯಗೊಂಡಿದ್ದಾರೆ. ನಂತರ ಮೂರನೇ ಮಹಡಿಯಲ್ಲಿರುವ ಯುನೈಟೆಡ್ ಇನ್ಶೂರೆನ್ಸ್ ಕಂಪನಿಯ ಕಚೇರಿಗೆ ಬೆಂಕಿ ತಗುಲಿದ್ದು,. ಈ ಕಚೇರಿಯೂ ಬೆಂಕಿಗೆ ಆಹುತಿಯಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳ ಸುಮಾರು 10 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಸತ್ತವರ ಮೃತದೇಹ ಹೊರತೆಗೆದಿದ್ದಾರೆ. ಝಾನ್ಸಿ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.(ಏಜೆನ್ಸೀಸ್)