ನ್ಯೂಸ್

ಮದುವೆ ಮುಗಿಸಿ ವಾಪಸ್​ ಆಗುವಾಗ ಟ್ರಕ್​ಗೆ SUV ಡಿಕ್ಕಿ; ನಾಲ್ವರು ವೈದ್ಯರು ಸೇರಿದಂತೆ ಐದು ಮಂದಿ ಸಾವು

ಲಖನೌ: ಮದುವೆ ಕಾರ್ಯಕ್ರಮ ಒಂದನ್ನು ಮುಗಿಸಿಕೊಂಡು ವಾಪಸ್​ ಆಗುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ವೈದ್ಯರು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಆಗ್ರಾ-ಲಖನೌ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ. ನಸುಕಿನ ಜಾವ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಎಸ್​ಯುವಿ (SUV) ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಡಾ. ಅನಿರುದ್ಧ್ ವರ್ಮಾ, ಡಾ. ಸಂತೋಷ್ ಕುಮಾರ್ ಮೌರ್ಯ, ಡಾ. ಜೈವೀರ್ ಸಿಂಗ್, ಡಾ. ಅರುಣ್ ಕುಮಾರ್ ಮತ್ತು ಡಾ. ನಾರ್ದೇವ್ ಎಂದು ಗುರುತಿಸಲಾಗಿದ್ದು, ಓರ್ವರಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿ ಪ್ರಿಯಾಂಕಾ ಬಾಜಪೈ, ನಸುಕಿನ ಜಾವ 3:30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಸೈಫೈನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತರ ಪಡೆದಿದ್ದರು ಎಂದು ತಿಳಿದು ಬಂದಿದೆ. ವಾಹನ ಚಾಲನೆ ಮಾಡುವಾಗ ಚಾಲಕ ನಿದ್ರಿಸಿದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಲಖನೌನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್​ ಆಗುತ್ತಿದ್ದರು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.