ನ್ಯೂಸ್

ಪತ್ರಕರ್ತನ ಹತ್ಯೆಗೈದ ನಾಲ್ವರು ಆರೋಪಿಗಳು ಅರೆಸ್ಟ್​

ಪಟ್ನಾ: ಶುಕ್ರವಾರ ಬೆಳಂಬೆಳಗ್ಗೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಿಬ್ಬರು ಜೈಲಿನಲ್ಲಿದ್ದು, ಇನ್ನಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬಂಧಿತರನ್ನು ವಿಪಿನ್​ ಯಾದವ್, ಭಾವೇಶ್​ ಯಾದವ್​, ಆಶಿಶ್​ ಯಾದವ್​ ಮತ್ತು ಉಮೇಶ್​ ಯಾದವ್​ ಎಂದು ತಿಳಿದು ಬಂದಿದೆ. ರೂಪೇಶ್​ ಯಾದವ್​ ಹಾಗೂ ಕ್ರಾಂತಿ ಯಾದವ್​ ಪೊಲೀಸರ ವಶದಲ್ಲಿದ್ದು, ಇನ್ನಿಬ್ಬರ ಹುಡುಕಾಟಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.

ಆರೋಪಿಗಳ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರು ತಲೆಮಾರಿಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ವಿಚಾರಣೆ ನಂತರ ಬಯಲಾಗಲಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ

ದೈನಿಕ್​ ಜಾಗರಣ್​ ಎಂಬ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವಿಮಲ್​ ಕುಮಾರ್​ ಯಾದವ್​ ಅವರನ್ನು ದುಷ್ಕರ್ಮಿಗಳ ಗುಂಪೊಂದು ಶುಕ್ರವಾರ ಬೆಳಗ್ಗೆ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿತ್ತು. 2019ರಲ್ಲೂ ಸಹ ಅವರ ಸಹೋದರನನ್ನು ದುಷ್ಕರ್ಮಿಗಳ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿತ್ತು. ಪ್ರಕರಣ ಒಂದರ ವಿಚಾರಣೆಯಲ್ಲಿ ಅವರ ಸಹೋದರ ಪ್ರಮುಖ ಸಾಕ್ಷಿಯಾಗಿದ್ದರು ಎಂದು ಹತ್ಯೆ ಮಾಡಿದ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು.

ವಿಮಲ್​ ಅವರ ಹತ್ಯೆ ಹಿಂದೆಯೂ ಇದೇ ಗ್ಯಾಂಗ್​ನ ಕೈವಾಡವಿರಬಹುದು ಎಂದು ಶಂಕಿಸಲಾಗಿದ್ದು, ಎರಡು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.