ನ್ಯೂಸ್

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಬೆಳಗಲಿವೆ ರಾಮನ ಹೆಸರಿನ 300ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು!

ಅಯೋಧ್ಯೆ: ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೂ ಮೊದಲು ದೇಶಾದ್ಯಂತ 343ಕ್ಕೂ ಹೆಚ್ಚು ರಾಮನ ಹೆಸರಿನಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಅಲಂಕಾರಗೊಳಿಸಿ, ಲೈಟಿಂಗ್ಸ್​ನಿಂದ ಮಿಂಚಿಸಲು ಇದೀಗ ಭಾರತೀಯ ರೈಲ್ವೇ ಇಲಾಖೆಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ರಾಮನ ಹೆಸರಿನ ಅತಿ ಹೆಚ್ಚು ರೈಲ್ವೇ ನಿಲ್ದಾಣಗಳನ್ನು ಹೊಂದಿದ್ದು, ಕ್ರಮವಾಗಿ 55 ಮತ್ತು 54 ಸ್ಟೇಷನ್​ಗಳನ್ನು ಹೊಂದಿದೆ. ರಾಮನ ಹೆಸರಿನಲ್ಲಿ ಅಧಿಕ ನಿಲ್ದಾಣಗಳನ್ನು ಹೊಂದಿರುವ ಸಾಲಿನಲ್ಲಿ ಬಿಹಾರ ಮೂರನೇ ಸ್ಥಾನದಲ್ಲಿದೆ.

ಆಂಧ್ರಪ್ರದೇಶದ ರಾಮಚಂದ್ರಪುರಂ, ರಾಮಪುರಂ, ಕರ್ನಾಟಕದ ರಾಮಗಿರಿ, ರಾಮನಗರ, ತೆಲಂಗಾಣದ ರಾಮಗುಂಡಂ ಮತ್ತು ರಾಮಕಿಸ್ತಪುರಂ, ರಾಮಣ್ಣಪೇಟ್, ಉತ್ತರ ಪ್ರದೇಶದ ರಾಮಚಂದ್ರಾಪುರ, ರಾಮ್‌ಗಂಜ್ ಮತ್ತು ರಾಮಚೌರಾ ಸೇರಿದಂತೆ ಹಲವಾರು ನಿಲ್ದಾಣಗಳನ್ನು ಅಲಂಕರಿಸಿ, ಲೈಟಿಂಗ್ಸ್​​ನಿಂದ ಮಿಂಚಿಸಲು ಸದ್ಯ ರೈಲ್ವೇ ಇಲಾಖೆ ಸಜ್ಜಾಗಿದೆ.

ಜ.22 ರಂದು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲು ವಿವಿಧ ಸ್ಥಳಗಳಿಂದ ಪ್ರಯಾಣಿಸಲು ಬಯಸುವ ಭಕ್ತರಿಗೆ 'ಆಸ್ತಾ ವಿಶೇಷ' ರೈಲುಗಳನ್ನು ಬಿಡಲು ರೈಲ್ವೇ ಇಲಾಖೆ ನಿರ್ಧರಿಸಿದ್ದು, ಈ ಮುಖೇನ ಯಾವುದೇ ಅಡಚಣೆಯಿಲ್ಲದೆ ಭಕ್ತಾಧಿಗಳು ತಮ್ಮ ಪ್ರದೇಶದಿಂದ ದೇವಾಲಯಕ್ಕೆ ಆಗಮಿಸಿ ನಂತರ ಹಿಂತಿರುಗುವ ವ್ಯವಸ್ಥೆಯನ್ನು ಮಾಡಿದೆ. ಈ ವಿಶೇಷ ರೈಲುಗಳು ಕೆಲವೆಡೆ ಮಾತ್ರ ನಿಲ್ಲಿಸುವುದೇ ಹೊರತು ಉಳಿದ ನಿಲ್ದಾಣಗಳಲ್ಲಿ ಸ್ಟಾಪ್ ನೀಡುವುದಿಲ್ಲ.

ಈ ವಿಶೇಷ ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸುವ ಭಕ್ತಾಧಿಗಳು ಮುಂಚಿತವಾಗಿಯೇ ಟಿಕೆಟ್​ ಬುಕ್ಕಿಂಗ್​ ಮಾಡತಕ್ಕದ್ದು, ಅತೀ ಮುಖ್ಯವಾಗಿ ರಿಟರ್ನ್​​ ಟಿಕೆಟ್​ ಕೂಡ ಬುಕ್ ಮಾಡಿಕೊಳ್ಳುವುದು ಒಳಿತು ಎಂದು ಇಲಾಖೆ ತಿಳಿಸಿದೆ,(ಏಜೆನ್ಸೀಸ್).