ನ್ಯೂಸ್

ಹಮಾಸ್​ ಉಗ್ರರಿಂದ ಮೂರೂ ಕಡೆಗಳಲ್ಲಿ ಸರ್ಪ್ರೈಸ್​ ದಾಳಿ: 300ಕ್ಕೂ ಹೆಚ್ಚು ಸಾವು, ಗಾಜಾ ಚಿತ್ರಣ ಬದಲಿಸುವ ಪ್ರತಿಜ್ಞೆ

ಜೆರುಸಲೇಂ: ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರ ಗುಂಪು ತುಂಬಾ ದಿನಗಳವರೆಗೆ ಕಾದು, ಸಂಚು ರೂಪಿಸಿ, ಸರಿಯಾದ ಸಮಯವನ್ನು ನೋಡಿ ಇಸ್ರೇಲ್​ ಮೇಲೆ ದಾಳಿ ಮಾಡಿದಂತಿದೆ. ಏಕೆಂದರೆ, ಭೂಪ್ರದೇಶ, ವಾಯು ಮತ್ತು ಸಮುದ್ರ ಪ್ರದೇಶ ಮೂರು ಕಡೆಗಳಿಂದಲೂ ದಾಳಿ ಮಾಡಿದ್ದು, ಇಸ್ರೇಲ್​ ಮೇಲೆ ತೀವ್ರ ಪರಿಣಾಮ ಬೀರಿದೆ. ಇಸ್ರೇಲ್​ ಕೂಡ ಪ್ರತಿದಾಳಿ ನಡೆಸಿದ್ದು, ಎರಡೂ ಕಡೆಯಿಂದಲೂ 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್​ ಪ್ರಧಾನಿ ಪ್ರತಿಜ್ಞೆ

ಇದರ ನಡುವೆ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಪ್ಯಾಲೇಸ್ತೀನ್​ ಹಮಾಸ್​ ಉಗ್ರರ ವಿರುದ್ಧ ಪ್ರತೀಕಾರದ ಶಪಥವೊಂದನ್ನು ಮಾಡಿದ್ದು, ಗಾಜಾ ಅಡಗುತಾಣಗಳನ್ನು ಅವಶೇಷಗಳಾಗಿ ಮಾಡುವುದಾಗಿ ಮತ್ತು ಇಡೀ ಗಾಜಾ ಚಿತ್ರಣವನ್ನೇ ಬದಲಿಸುವುದಾಗಿ ಹೇಳಿದ್ದಾರೆ. ಇಸ್ರೇಲ್​ಗೆ ಇದು ಕರಾಳ ದಿನ ಎಂದಿದ್ದಾರೆ. ಹಮಾಸ್‌ನ ಎಲ್ಲ ಸಾಮರ್ಥ್ಯಗಳನ್ನು ನಾಶಮಾಡಲು ಇಸ್ರೇಲ್​ ಸೇನೆ ತನ್ನ ಎಲ್ಲ ಬಲವನ್ನು ಬಳಸಲಿದೆ. ನಾವು ಅವರನ್ನು ಅಂತ್ಯಂತ ಹೀನ ಸ್ಥಿತಿಗೆ ದೂಡುವ ಮೂಲಕ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.

ಭಾರತೀಯರಿಗೆ ಎಚ್ಚರಿಕೆ

ಈ ದಾಳಿಯಲ್ಲಿ ಇಸ್ರೇಲ್​ ಮಿಲಿಟರಿ ಪಡೆಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ ಮತ್ತು ಪ್ಯಾಲೆಸ್ತೀನ್​ ಗುಂಪು, ಡಜನ್​ಗಟ್ಟಲೆ ಇಸ್ರೇಲ್​ ಸೈನಿಕರನ್ನು ಸೆರೆಹಿಡಿದಿರುವುದಾಗಿ ತಿಳಿಸಿದೆ.​ ಹಮಾಸ್​ ಉಗ್ರರ ಗುಂಪು ಮನೆ ಮನೆಗಳಿಗೆ ನುಗ್ಗಿ ನಾಗರಿಕ ಕಗ್ಗೊಲೆ ಮಾಡುತ್ತಿದೆ ಎಂದು ಇಸ್ರೇಲ್​ ಸೇನೆ ತಿಳಿಸಿದೆ. ಸಂಘರ್ಷ ಜೋರಾಗುತ್ತಿದ್ದಂತೆ ಇಸ್ರೇಲ್​ನಲ್ಲಿರುವ ಭಾರತದ ದೂತವಾಸ ಕಚೇರಿಯು ಭಾರತದ ಪ್ರಜೆಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಜಾಗರೂಕರಾಗಿರುವಂತೆ ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಕೇಳಿದೆ. ಅನವಶ್ಯಕವಾಗಿ ಯಾರೂ ಹೊರಬಾರದೆ ಆಶ್ರಯ ತಾಣಗಳಲ್ಲಿ ಉಳಿದುಕೊಳ್ಳುವಂತೆ ಸಲಹೆ ನೀಡಿದೆ.

ಶನಿವಾರ ಬೆಳಗ್ಗೆ ದಾಳಿ

ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್‌ ಉಗ್ರಗಾಮಿ ಗುಂಪು ಶನಿವಾರ (ಅ.07) ಬೆಳಗಿನ ಜಾವ ಇಸ್ರೇಲ್ ಮೇಲೆ ಭಾರಿ ಪ್ರಮಾಣದ ದಾಳಿ ನಡೆಸಿತು. 5 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳ ಮೂಲಕ ಬೆಂಕಿಯ ಮಳೆಯನ್ನೇ ಸುರಿಸಿದೆ. ಇದರ ಜತೆಗೆ ಹಮಾಸ್ ಉಗ್ರರು ಇಸ್ರೇಲ್‌ನ ಹಲವಾರು ಗಡಿ ಪ್ರದೇಶಗಳಲ್ಲಿ ನುಸುಳಿದ್ದು, ಹಿಂಸಾಚಾರ ಸೃಷ್ಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್‌ನಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇವೆಯು ಆಪರೇಷನ್ ಐರನ್ ಸ್ಫೋರ್ಡ್ ಹೆಸರಿನಲ್ಲಿ ಹಮಾಸ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ.

500ಕ್ಕೂ ಅಧಿಕ ಸಾವು

ಸದ್ಯದ ಮಾಹಿತಿ ಮೇರೆಗೆ ಇಸ್ರೇಲ್​ನಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಗಾಜಾ ಮೇಲಿನ ಇಸ್ರೇಲ್​ ಪ್ರತಿದಾಳಿಗೆ 230ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಸ್ಥಳೀಯ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೇಸ್​ಮೆಂಟ್​ಗಳಲ್ಲಿ ಅಡಗಿಕೊಂಡಿದ್ದಾರೆ. ಎರಡೂ ಕಡೆಗಳಿಂದ ಒಟ್ಟು 500ಕ್ಕೂ ಹೆಚ್ಚು ಸಾವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?

ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

ಗಾಜಾ ಪಟ್ಟಿ ಎಂದರೇನು? 

ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್​)