ನವದೆಹಲಿ : ಕರೊನಾ ಲಸಿಕೆಯ ಬಗ್ಗೆ ಹಲವಾರು ಸುಳ್ಳು ಮಾಹಿತಿಗಳು ಮತ್ತು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸಾಮಾನ್ಯ ವಿಚಾರವಾಗಿದೆ. ಈ ರೀತಿಯ ಸುಳ್ಳು ವದಂತಿಗಳನ್ನು ಹರಡುವ ವ್ಯವಸ್ಥಿತ ಸಂಚೊಂದನ್ನು ಫೇಸ್ಬುಕ್ ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 300 ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ತೆಗೆದುಹಾಕಿದೆ.
ಸದರಿ ಖಾತೆಗಳು ಆಸ್ಟ್ರಾಜೆನೆಕಾ ಮತ್ತು ಫೈಜರ್ನ ಕರೊನಾ ಲಸಿಕೆಗಳು ಮನುಷ್ಯರನ್ನು ಚಿಂಪಾಜೀಗಳನ್ನಾಗಿ ಬದಲಾಯಿಸುತ್ತವೆ ಎಂಬ ಮೀಮ್ಗಳು ಮತ್ತು ಇತರ ಸಂದೇಶಗಳನ್ನು ಹರಡುತ್ತಿದ್ದವು. ಪ್ಲಾನೆಟ್ ಆಫ್ ಏಪ್ಸ್ ಎಂಬ ಹಾಲಿವುಡ್ ಚಿತ್ರದ ದೃಶ್ಯವನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದವು ಎನ್ನಲಾಗಿದೆ.
ಈ ಸಂಬಂಧವಾಗಿ, ಇಂಗ್ಲೆಂಡಿನಲ್ಲಿ ನೋಂದಾಯಿಸಲ್ಪಟ್ಟ ಫಾಜ್ ಎಂಬ ಮಾರ್ಕೆಟಿಂಗ್ ಕಂಪೆನಿಯು ಮುಖ್ಯವಾಗಿ ರಷ್ಯಾದಿಂದ ಆಪ್ರೇಟ್ ಮಾಡುತ್ತಿದ್ದ 300 ಖಾತೆಗಳು ಪತ್ತೆಯಾದವು. ಇವು ಪ್ರಾಥಮಿಕವಾಗಿ ಭಾರತ ಮತ್ತು ಲ್ಯಾಟಿನ್ ಅಮೆರಿಕಾದ ಜನರಿಗೆ ಸುಳ್ಳು ಮಾಹಿತಿ ನೀಡುವ ಗುರಿ ಹೊಂದಿದ್ದವು ಎಂದು ವರದಿ ಹೇಳಿದೆ. (ಏಜೆನ್ಸೀಸ್)