ಚೆನ್ನೈ: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಆಕೆಯ ಮಗಳ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮರಿಮಲೈ ನಗರದಲ್ಲಿ ಮಂಗಳವಾರ ನಡೆದಿದೆ.
ಮೃತಳನ್ನು ಧರಣಿ (21) ಎಂದು ಗುರುತಿಸಲಾಗಿದೆ. ಈಕೆ ಮರಿಮಲೈ ನಗರದ ರಾಜೀವ್ಗಾಂಧಿ ನಗರದ ನಿವಾಸಿ ಹಾಗೂ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಸುಂದರ್ ಎಂಬಾತನ ಪತ್ನಿ. ದಂಪತಿಗೆ ಇಬ್ಬರು ಮಕ್ಕಳಿದ್ದರು.
ಸುಂದರ್ ಸ್ನೇಹಿತ ಸುಡಾನ್ (30) ಆಗಾಗ ಮನೆಗೆ ಭೇಟಿ ನೀಡುತ್ತಿದ್ದ. ಇಬ್ಬರು ಜನತೆಯಲ್ಲೇ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಸುಡಾನ್ ಮತ್ತು ಧರಣಿ ನಡುವೆ ಸ್ನೇಹ ಬೆಳೆದಿತ್ತು. ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿತು. ಇಬ್ಬರು ಸುಂದರ್ಗೆ ಗೊತ್ತಾಗದಂತೆ ರಹಸ್ಯ ಸಂಬಂಧವನ್ನು ಇಟ್ಟುಕೊಂಡಿದ್ದರು.
ಕೆಲವು ತಿಂಗಳುಗಳ ಹಿಂದೆ ಸುಂದರ್ಗೆ ಈ ವಿಚಾರ ಗೊತ್ತಾಗಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಇದಾದ ಬಳಿಕ ಧರಣಿ ಸುಡಾನ್ ಜತೆ ಮಾತನಾಡುವುದನ್ನು ನಿಲ್ಲಿಸಿದಳು. ಇದರ ನಡುವೆ ಧರಣಿಗೆ ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ ಇರುವುದು ಸುಡಾನ್ಗೆ ತಿಳಿಯಿತು. ಬಳಿಕ ಸುಡಾನ್, ಧರಣಿಯನ್ನು ಭೇಟಿಯಾಗಿ ಪ್ರಶ್ನೆ ಮಾಡಿದನು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿಯು ಸಹ ನಡೆಯಿತು.
ಆದರೆ, ಮರುದಿನ ಬೆಳಗ್ಗೆ ಅಂದರೆ ಮಂಗಳವಾರ ಸುಂದರ್, ತನ್ನ ಕೆಲಸಕ್ಕೆ ತೆರಳಿದಾಗ, ಆತನ ಮನೆಗೆ ತೆರಳಿದ ಸುಡಾನ್, ಎರಡು ವರ್ಷದ ಮಗಳ ಎದುರಲ್ಲೇ ಚಾಕುವಿನಿಂದ ಧರಣಿಯ ಮೇಲೆ ದಾಳಿ ಮಾಡಿದ್ದಾನೆ. ಆಕೆ ಮೃತಪಟ್ಟಿರುವುದು ಖಚಿತವಾದ ಬಳಿಕ ಚಾಕು ಸಮೇತ ಮರಿಮಲೈ ನಗರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಸುಡಾನ್ ಶರಣಾಗಿದ್ದಾನೆ.
ಇದಾದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಧರಣಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)