ನ್ಯೂಸ್

30.26 ಲಕ್ಷ ರೈತರಿಗೆ 19,370 ಕೋಟಿ ರೂ. ಸಾಲ: ಸಾಲ ಮನ್ನಾ ಯೋಚನೆ ಇಲ್ಲ, ಬಲವಂತದ ಸಾಲ ವಸೂಲಿಯೂ ಇಲ್ಲ

ಬೆಂಗಳೂರು: ರಾಜ್ಯದ 30.26 ಲಕ್ಷ ರೈತರಿಗೆ 2021-22ನೇ ಸಾಲಿನಲ್ಲಿ 19,370 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ 0.60 ಲಕ್ಷ ರೈತರಿಗೆ 1,440 ಕೋಟಿ ರೂ. ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಒಟ್ಟು 30.86 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ನೀಡಿಕೆ ಗುರಿ ಹೊಂದಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಾಲ ಮನ್ನಾ ಬಗ್ಗೆ ಯೋಚಿಸಿಲ್ಲ. ಶೂನ್ಯ ಬಡ್ಡಿದರದ ಸಾಲ ಶೇ.100 ಗುರಿ ಸಾಧಿಸಲು ಪ್ರಯತ್ನಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಡಿ.31ರವರೆಗೆ 19.27 ಲಕ್ಷ ರೈತರಿಗೆ 13,295 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ, 0.31 ಲಕ್ಷ ರೈತರಿಗೆ 893 ಕೋಟಿ ರೂ. ಮಧ್ಯಮಾವಧಿ/ದೀರ್ಘಾವಧಿ ಸಾಲ ಸೇರಿ ಒಟ್ಟು 19.58 ಲಕ್ಷ ರೈತರಿಗೆ 14,188 ರೂ. ಕೋಟಿ ಕೃಷಿ ಸಾಲ ನೀಡಲಾಗಿದೆ. ಮೂರು ತಿಂಗಳಲ್ಲಿ ಉಳಿದ ಗುರಿ ಸಾಧಿಸಲು ಸಂಬಂಧಿಸಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದರು.

ಬಡ್ಡಿ ಸಹಾಯಧನಕ್ಕೆ 1012 ಕೋಟಿ ರೂ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಡಿಸಿಸಿ ಬ್ಯಾಂಕಿನ ಅಲ್ಪಾವಧಿ ಮತ್ತು ಮಧ್ಯಮಾವಧಿ ಕೃಷಿ ಸಾಲ ವಸೂಲಾತಿ ಕ್ರಮವಾಗಿ ಶೇ.94.93 ಹಾಗೂ ಶೇ.76.29 ಆಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಈ ವರ್ಷದಲ್ಲಿ ಸಹಕಾರ ಸಂಸ್ಥೆಗಳಿಗೆ ರೂ.1,012 ಕೋಟಿಗಳ ಬಡ್ಡಿ ಸಹಾಯಧನ ನೀಡಲು ಅನುದಾನ ಕಲ್ಪಿಸಿದ್ದು, ಈವರೆಗೆ 757.21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ: ಡಿ.31ರವರೆಗೆ ಸಾಲ ವಿತರಣೆ 19,196 ಸ್ವಸಹಾಯ ಗುಂಪುಗಳಿಗೆ 689 ಕೋಟಿ ರೂ. ನೀಡಲಾಗಿದೆ. ಈ ಸಾಲಿನಲ್ಲಿ ವಸೂಲಾಗುವ ಸಾಲಗಳಿಗೆ ಬಡ್ಡಿ ಸಹಾಯಧನಕ್ಕಾಗಿ ಆಯವ್ಯಯದಲ್ಲಿ 90.41 ಕೋಟಿ ರೂ. ಒದಗಿಸಲಾಗಿದ್ದು, ಡಿಸಿಸಿ ಬ್ಯಾಂಕುಗಳಿಗೆ ಇದುವರೆಗೆ 36.01 ಕೋಟಿ ರೂ. ಬಡ್ಡಿ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಅಡಮಾನ ಸಾಲ ವಿತರಣೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಮಾರುಕಟ್ಟೆ ಸಹಕಾರ ಸಂಘಗಳು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ತಮ್ಮ ಗೋದಾಮುಗಳಲ್ಲಿ ಶೇಖರಣೆ ಮಾಡಿ ಶೇ.7ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಯೋಜನೆಯಲ್ಲಿ ಈ ಸಾಲಿನಲ್ಲಿ ಡಿಸೆಂಬರ್ ಅಂತ್ಯದವರೆಗೆ 18,958 ರೈತರಿಗೆ 306 ಕೋಟಿ ರೂ. ಸಾಲ ವಿತರಿಸಲಾಗಿದೆ.

ಸಹಕಾರ ಬ್ಯಾಂಕುಗಳ ಮಾಹಿತಿ: ರಾಜ್ಯದಲ್ಲಿ ಒಟ್ಟು 264 ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ಇವು ಡಿಸೆಂಬರ್ ಅಂತ್ಯಕ್ಕೆ 45,580.09 ಕೋಟಿ ರೂ. ಠೇವಣಿ, 52,593.94 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 29,219.38 ಕೋಟಿ ರೂ. ಸಾಲ ಮತ್ತು ಮುಂಗಡ ನೀಡಿವೆ. ಜತೆಗೆ 301.34 ಕೋಟಿ ರೂ. ಲಾಭ ಗಳಿಸಿರುತ್ತವೆ. 18 ಪಟ್ಟಣ ಬ್ಯಾಂಕುಗಳನ್ನು ದುರ್ಬಲ ಸಹಕಾರ ಬ್ಯಾಂಕುಗಳೆಂದು ಗುರುತಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.

ಕರೊನಾ ಸೋಂಕಿನ ತೀವ್ರತೆ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಚುನಾವಣೆಯನ್ನು ಮಾರ್ಚ್ 31ರವರೆಗೆ ಮುಂದೂಡಲಾಗಿದೆ. ಸೋಂಕು ಇಳಿಮುಖವಾದರೆ ಸಿಎಂ ಗಮನಕ್ಕೆ ತಂದು ಚುನಾವಣೆ ನಡೆಸಲು ಕ್ರಮಕೈಗೊಳ್ಳಾಗುವುದು | ಎಸ್.ಟಿ.ಸೋಮಶೇಖರ್ ಸಹಕಾರ ಸಚಿವ

ಬಹೂಪಯೋಗಿ ಕೇಂದ್ರ ಸ್ಥಾಪನೆ: ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಬಹೋಪ ಯೋಗಿ ಕೇಂದ್ರಗಳನ್ನಾಗಿ ಸ್ಥಾಪಿಸುವ ಯೋಜನೆ ರೂಪಿಸಲಾಗಿದ್ದು, ಈ ಯೋಜನೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಗೋದಾಮು ಸೌಲಭ್ಯ ಮತ್ತು ಕೊಯ್ಲು ನಂತರದ ಮೂಲಭೂತ ಸೌಕರ್ಯವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ. 1000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ನಬಾರ್ಡ್ 873 ಸಂಘಗಳಿಗೆ 302 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.