ನ್ಯೂಸ್

3 ವರ್ಷದ ಮಗುವನ್ನು ರೇಪ್​ ಮಾಡಿ ಕೊಂದೇ ಹಾಕಿದ ಪಾಪಿ! ಪೆರೋಲ್​ ಪಡೆದು ಹತ್ತೇ ದಿನದಲ್ಲಿ ಮತ್ತೆ ಅರೆಸ್ಟ್​!

ಮುಂಬೈ: ಅತ್ಯಾಚಾರ ಪ್ರಕರಣದ ಆರೋಪದಲ್ಲಿ ಜೈಲು ಸೇರಿ, ಪೆರೋಲ್​ ಮೇಲೆ ಹೊರಬಂದಿದ್ದ ಅಪರಾಧಿಯೊಬ್ಬ ರೇಪ್​ ಮತ್ತು ಮರ್ಡರ್​ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಸೇರಿದ್ದಾನೆ. ಮೂರು ವರ್ಷದ ಮಗುವಿನ ಮೇಲೆ ಆತ ರೇಪ್​ ಮಾಡಿದ್ದಾಗಿ ವರದಿಯಾಗಿದೆ.

ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆದೇಶ್​ ಪಾಟೀಲ್​ ಹೆಸರಿನ ವ್ಯಕ್ತಿ ಬಂಧಿತ ಆರೋಪಿ. ಈತ ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಕಳೆದ 10 ದಿನಗಳ ಹಿಂದಷ್ಟೇ ಈತನಿಗೆ ಪೆರೋಲ್​ ಸಿಕ್ಕಿದ್ದು, ಜೈಲಿನಿಂದ ಹೊರ ಕಳುಹಿಸಲಾಗಿತ್ತು.

ಡಿಸೆಂಬರ್​ 30ರಂದು ಜಿಲ್ಲೆಯ ಗ್ರಾಮವೊಂದರಲ್ಲಿ ಕುಟುಂಬವೊಂದು ತಮ್ಮ 3 ವರ್ಷದ ಮಗಳೊಂದಿಗೆ ಗುಡಿಸಲಿನಲ್ಲಿ ಮಲಗಿತ್ತು. ಭದ್ರವಾದ ಬಾಗಿಲು ಇಲ್ಲದ ಗುಡಿಸಲಿನಲ್ಲಿ ಮಲಗಿದ್ದ ಹೆಣ್ಣು ಮಗುವನ್ನು ಆದೇಶ್​ ಪಾಟೀಲ್​ ಎತ್ತಿಕೊಂಡು ಹೋಗಿದ್ದಾನೆ. ಗ್ರಾಮದ ಶಾಲೆಯ ಹಿಂದಿದ್ದ ಪೊದೆಗಳಲ್ಲಿ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಮಗುವನ್ನು ಕೊಲೆ ಮಾಡಿದ್ದಾನೆ. ಮಗುವನ್ನು ವಾಪಾಸು ತಂದು ಗುಡಿಸಲಿನಲ್ಲಿ ಮಲಗಿಸಿದ್ದಾನೆ. ಈ ಸಮಯದಲ್ಲಿ ಮಗುವಿನ ಅಜ್ಜಿ ಎಚ್ಚರಗೊಂಡಿದ್ದು, ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಆದೇಶ್ ಅಲ್ಲಿಂದ ಪರಾರಿಯಾಗಿದ್ದಾನೆ.

ಗುರುವಾರದಂದು ಆದೇಶ್​ನ ವಿರುದ್ಧ ಪೊಲೀಸ್​ ಪ್ರಕರಣ ದಾಖಲಿಸಲಾಗಿದ್ದು, ಸ್ಥಳೀಯ ಪೊಲೀಸರು ಆತನನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಚಾರ, ಕೊಲೆ, ಪೋಸ್ಕೋ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅದಷ್ಟೇ ಅಲ್ಲದೆ ಆತನ ವಿರುದ್ಧ ದರೋಡೆ, ಬೆದರಿಕೆ, ಕಳ್ಳತನ ಪ್ರಕರಣಗಳೂ ಇರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)