ನ್ಯೂಸ್

ಯಲ್ಲಾಪುರದಲ್ಲೊಂದು ಮನಕಲಕುವ ದುರಂತ; ಒಂದೇ ಮನೆಯ ಮೂವರು ಮಹಿಳೆಯರ ದಾರುಣ ಸಾವು

ಯಲ್ಲಾಪುರ: ಒಂದೇ ಕುಟುಂಬದ ಮಹಿಳೆಯರು ಮೃತಪಟ್ಟ ದುರ್ಘಟನೆ ಜಕ್ಕೊಳ್ಳಿ ಸಮೀಪದ ದೊಡ್ಡಬೇಣ ಎಂಬಲ್ಲಿ ನಡೆದಿದೆ. ಸರಿತಾ ಆದಿತ್ಯ ನಾಯ್ಕ (26), ಶ್ವೇತಾ ದಿನೇಶ ನಾಯ್ಕ(30), ಗೌರಿ ಶಿವಾ ನಾಯ್ಕ್​​(55) ಮೃತರು.

ಮೊದಲು ಸರಿತಾ ಅವರು ತೋಟಕ್ಕೆ ನೀರು ತರಲು ಹೋಗಿದ್ದರು. ಆದರೆ ಕಾಲುಜಾರಿ ಬಾವಿಯಲ್ಲಿ ಬಿದ್ದಿದ್ದಾರೆ. ಸರಿತಾರನ್ನು ರಕ್ಷಿಸಲು ಅವರ ಅತ್ತಿಗೆ ಶ್ವೇತಾ ಬಾವಿಗೆ ಧುಮುಕಿದ್ದಾರೆ. ಆದರೆ ಇಬ್ಬರೂ ನೀರಿನಲ್ಲಿ ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ.

ಮಗಳು ಹಾಗೂ ಹಿರಿಯ ಸೊಸೆ ಇಬ್ಬರೂ ಮೃತಪಟ್ಟ ಸುದ್ದಿಕೇಳುತ್ತಿದ್ದಂತೆ ಆಘಾತಕ್ಕೊಳಗಾದ ಗೌರಿ ನಾಯ್ಕ್​ ತೀವ್ರ ಅಸ್ವಸ್ಥರಾಗಿ ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಅವರೂ ಸಹ ಸಾವನ್ನಪ್ಪಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.