ರಾಯಚೂರು: ಮಂತ್ರಾಲಯಕ್ಕೆ ಪ್ರವಾಸ ಬಂದಿದ್ದ ಮೂವರು ಹಾಸನ ಮೂಲದ ವಿದ್ಯಾರ್ಥಿಗಳು ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ ವೇಳೆ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ಘಟನೆ ಶನಿವಾರ (ಜು.12) ಸಂಜೆ ಸಂಭವಿಸಿದೆ.
ಮೂವರು ವಿದ್ಯಾರ್ಥಿಗಳನ್ನು ಹಾಸನದ ಅಜಿತ್ (19), ಸಚಿನ್ (20) ಮತ್ತು ಪ್ರಮೋದ್ (20) ಎಂದು ಗುರುತಿಸಲಾಗಿದೆ. ಇವರ ಪತ್ತೆಗೆ ಮಂತ್ರಾಲಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಮೂವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹಾಸನದಿಂದ ಒಟ್ಟು 7 ಜನ ಸ್ನೇಹಿತರು ಮಂತ್ರಾಲಯಕ್ಕೆ ರಾಯರ ದರ್ಶನ ಪಡೆಯಲು ಬಂದಿದ್ದರು ಎಂದು ಹೇಳಲಾಗಿದೆ. ಆದರೆ, ಮೂವರು ಮಾತ್ರ ನದಿಯಲ್ಲಿ ಕೊಚ್ಚಿ ಹೋಗಿರುವುದಾಗಿ ವರದಿಯಾಗಿದೆ.
ತುಂಗಭದ್ರಾ ನದಿಯಲ್ಲಿ ಪ್ರವಾಹ ಭೀತಿಯಿದ್ದು ಯಾರೂ ನದಿಗಿಳಿಯದಂತೆ ಪೊಲೀಸರು ಹಾಗೂ ಮಠದ ಆಡಳಿತ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದರೂ ನದಿಗೆ ಈಜಲು ಇಳಿದಿದ್ದ ಈ ಮೂವರು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆಂದು ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಂತ್ರಾಲಯ ಪೊಲೀಸರು ನಾಪತ್ತೆಯಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.