ಪಟನಾ: ಕಾರೊಂದಕ್ಕೆ ರೈಲು ಡಿಕ್ಕಿಯಾದ ಪರಿಣಾಮ ನಾಲ್ಕು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ಬಿಹಾರದ ಪಟನಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಕಾರು ಪೊಟಾಹಿ ಮತ್ತು ನದ್ವಾನ್ ನಡುವಿನ ರೈಲ್ವೇ ಹಳಿ ಕ್ರಾಸ್ ಮಾಡುವಾಗ ಪಟನಾ-ರಾಂಚಿ ಜನ್ಶತಾಬ್ದಿ ಸ್ಪೆಷನ್ ಟ್ರೈನ್ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 6.35ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೂರ್ವ ಕೇಂದ್ರ ರೈಲ್ವೆ ವಲಯದ ಸಿಪಿಆರ್ಒ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದು ಕಾರು ಚಾಲಕನ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಸಿಗ್ನಲ್ ಇದ್ದರೂ ಅನಧಿಕೃತವಾಗಿ ಹಳಿ ಕ್ರಾಸ್ ಮಾಡಲು ಯತ್ನಿಸಿದರು. ಗಯಾಗೆ ತೆರಳುತ್ತಿದ್ದ ರೈಲು ಇದೇ ವೇಳೆ ಡಿಕ್ಕಿ ಹೊಡೆದಿದೆ ಎಂದು ಕುಮಾರ್ ಹೇಳಿದ್ದಾರೆ.
ಮೃತರನ್ನು ಸುಜಿತ್ (32) ಪತ್ನಿ ನಿಲಿಮಾ (26) ಎಂದು ತಿಳಿದುಬಂದಿದೆ. ಮಗುವಿನ ಹೆಸರು ತಿಳಿದುಬರಬೇಕಿದೆ. ಇವರು ಪಟನಾ ನಗರದ ಆನಂದಪುರಿ ಏರಿಯಾದವರು ಎಂದು ಪನ್ಪನ್ ಪೊಲೀಸ್ ಠಾಣೆಯ ಎಸ್ಎಚ್ಒ ಹೇಳಿದ್ದಾರೆ.
ಈ ಸಂಬಂಧ ದೂರು ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ವರದಿಗೆ ಕಳುಹಿಸಲಾಗಿದೆ. (ಏಜೆನ್ಸೀಸ್)