ಬೆಂಗಳೂರು: ರಾಜ್ಯದಲ್ಲಿ ಇ-ಖಾತೆ ಬಿಕ್ಕಟ್ಟು ತಲೆದೋರಿದ ಬಳಿಕ ಬೊಕ್ಕಸದ ಮೇಲಾಗಿರುವ ಪರಿಣಾಮವನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳ ಅನಧಿಕೃತ ಬಡಾವಣೆಗಳ ನಿವೇಶನದಾರರಿಗೆ ಮೂರು ತಿಂಗಳೊಳಗೆ ಬಿ ಖಾತೆ ನೀಡುವಂತೆ ಶನಿವಾರ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪೌರಾಡಳಿತ ಇಲಾಖೆಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿನ ಭೂ ನೋಂದಣಿ ಪ್ರಕ್ರಿಯೆ, ಇ-ಸ್ವತ್ತು ಹಾಗೂ ಇದಕ್ಕೆ ಸಂಬಂಧಿಸಿದ ತಂತ್ರಾಂಶಗಳ ಕುರಿತು ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ ಸಚಿವರನ್ನು ಸಿಎಂ ತಮ್ಮ ಗೃಹಕಚೇರಿಗೆ ಕರೆಸಿಕೊಂಡಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಪರ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಈ ಕುರಿತು ಮಹತ್ವದ ನಿರ್ದೇಶನ ನೀಡಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಬಡಾವಣೆಗಳಲ್ಲಿ ನಿವೇಶನದಾರರಿಗೆ ‘ಎ’ ಖಾತೆ ನೀಡಲು ಅವಕಾಶವಿಲ್ಲ. ಈ ಬಗ್ಗೆ ಸುಪ್ರಿಂಕೋರ್ಟ್ ಸ್ಪಷ್ಟ ಸೂಚನೆ ಇದೆ. ಹೀಗಾಗಿ ಅಂತಹ ನಿವೇಶನದಾರರಿಗೆ ‘ಬಿ’ ಖಾತೆ ನೀಡಲು ಸರ್ಕಾರ ಆದೇಶ ಹೊರಡಿಸಿದ್ದು, ಅದರ ಅನುಷ್ಠಾನಕ್ಕೆ ಮೂರು ತಿಂಗಳ ಕಾಲಮಿತಿಯನ್ನು ಬಗೆಹರಿಸಲು ನಿರ್ಣಯಿಸಲಾಗಿದೆ. ಜನರನ್ನು ಅಲೆದಾಡಿಸದೇ ಅವರಿಗೆ ‘ಬಿ’ ಖಾತೆ ಹಂಚಿಕೆ ಮಾಡಬೇಕು. ಮೂರು ತಿಂಗಳೊಳಗೆ ನಗರ ಸ್ಥಳೀಯ ಸಂಸ್ಥೆಯ ಅನಧಿಕೃತ ಬಡಾವಣೆಯಲ್ಲಿ ನಿವೇಶನ ಖರೀದಿಸಿದವರಿಗೆ ಬಿ ಖಾತೆ ಸಿಗುವಂತಾಗಬೇಕು, ಆಂದೋಲನ ರೀತಿಯಲ್ಲಿ ಈ ಕಾರ್ಯ ಆಗಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ಯಾರು ಖರೀದಿ ಪತ್ರ ಪಡೆದು ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೋ ಅಂತವರಿಗೆ ಮಾತ್ರ ಬಿ ಖಾತೆ ಪಡೆಯಲು ಅವಕಾಶ ಇರಲಿದೆ. ಜತೆಗೆ ಇದು ಒಂದು ಬಾರಿಗೆ ಮಾತ್ರ ಅವಕಾಶವಿರುತ್ತದೆ. ಜತೆಗೆ ಇನ್ನು ಮುಂದೆ ನಡೆಯುವ ಮಾರಾಟಕ್ಕೆ ಅನ್ವಯ ಆಗುವುದಿಲ್ಲ. ಜತೆಗೆ ಇನ್ನು ಮುಂದೆ ‘ಎ’ ಖಾತೆ ಮಾತ್ರ ಇರಬೇಕು. ‘ಬಿ’ ಖಾತೆ ಕಲ್ಪನೆಯೇ ಇರಕೂಡಡು ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಅದೇ ರೀತಿ ನಗರಾಭಿವೃದ್ಧಿ ಪ್ರದೇಶದ ಹೊರಭಾಗದಲ್ಲಿನ ಅನಧಿಕೃತ ನಿವೇಶನಗಳಿಗೂ ಬಿ ಖಾತೆ ಲಭ್ಯವಾಗುವಂತೆ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ತಯಾರಾಗಬೇಕೆಂದು ಸಿಎಂ ತಿಳಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಯಲ್ಲಿನ ಅನಧಿಕೃತ ಬಡಾವಣೆಯ ನಿವೇಶನದಾರರಿಗೆ ಎ ಖಾತೆ ಕೊಡಲು ಅವಕಾಶವಿಲ್ಲ. ಬಿ ಖಾತೆ ಕೊಡಲು ನಿರ್ಧರಿಸಲಾಗಿದೆ. ಆಂದೋಲನ ಮಾದರಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಅರ್ಹರಿಗೆ ಬಿ ಖಾತೆ ವಿತರಣೆಗೆ ಸೂಚನೆ ಕೊಡಲಾಗಿದೆ. | ಕೃಷ್ಣಬೈರೇಗೌಡ ಕಂದಾಯ ಸಚಿವ
1. ರೆವಿನ್ಯೂ ನಿವೇಶನ ದಾರರು ಖರೀದಿ ಪತ್ರ ಪಡೆದಿರಬೇಕು ಮತ್ತು ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿರಬೇಕು.
2. ಈ ತೀರ್ಮಾನ ಒಂದು ಬಾರಿಗೆ ಮಾತ್ರ ಅನ್ವಯವಾಗುವ ಕಾರಣ, ಹೊಸದಾಗಿ ಖರೀದಿಸುವವರಿಗೆ ಅವಕಾಶ ಆಗುವುದಿಲ್ಲ.
3. ಕಟ್ ಆಫ್ ದಿನಾಂಕ ಹಾಗೂ ಬಿ ಖಾತೆ ಪಡೆದುಕೊಳ್ಳುವ ವಿಧಾನದ ಕುರಿತು ಸದ್ಯವೇ ಮಾಹಿತಿ ಪ್ರಕಟಣೆ ಹೊರಬೀಳಲಿದೆ.
ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಅದನ್ನು ಮಾರಾಟ ಮಾಡಲೂ ಆಗದೇ ಚಡಪಡಿಸುತ್ತಿದ್ದ ಲಕ್ಷಾಂತರ ಸಂಖ್ಯೆಯ ನಿವೇಶನ ಮಾಲೀಕರಿಗೆ ಸರ್ಕಾರದ ಒಂದು ಬಾರಿಯ ಈ ಕ್ರಮ ಅನುಕೂಲವಾಗಲಿದೆ. ‘ಬಿ’ ಖಾತೆ ಪಡೆದುಕೊಂಡು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು, ಅಥವಾ ನಿವೇಶನ ಮಾರಾಟಕ್ಕೂ ಅವಕಾಶವಾಗುವುದು. ಜತೆಗೆ ಈ ನಿವೇಶನಗಳು ತೆರಿಗೆ ವ್ಯಾಪ್ತಿಗೂ ಬರಲಿದೆ. ನಿವೇಶನ ಮಾರಾಟಕ್ಕೆ ಅವಕಾಶ ಮಾಡಿಕೊಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟಿದ ಆದಾಯವೂ ಬರುವ ನಿರೀಕ್ಷೆ ಇದೆ.
ನೋಂದಣಿ ಮಾಡಿಸಿಕೊಳ್ಳುವ ಗ್ರಾಹಕರಿಗೆ ಡಿಜಿಟಲ್ ನೋಂದಣಿ ದಸ್ತಾವೇಜು ತಲುಪುವ ವ್ಯವಸ್ಥೆ ಆಗಬೇಕು ಹಾಗೂ ಜಿಐಎಸ್ ಆಧಾರಿತ ಮಾರ್ಗಸೂಚಿ ದರ ನಿಗದಿ ವ್ಯವಸ್ಥೆಯನ್ನು ಇನ್ನೆರೆಡು ವಾರದಲ್ಲೇ ರೂಪಿಸಬೇಕು ಎಂದು ಇ-ಗೌರ್ನೆನ್ಸ್ ಇಲಾಖೆಗೆ ಸಿಎಂ ಸೂಚನೆ ನೀಡಿದರು.
ಮಾಹಿತಿ ಕೊರತೆಯಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೆ ಅನಧಿಕೃತ ಬಡಾವಣೆಯಲ್ಲಿ ನಿವೇಶನ ಪಡೆದವರಿಗೆ ‘ಬಿ’ ಖಾತೆ ಒಂದು ಸಣ್ಣ ನಿರಾಳ ಮಾತ್ರ. ಬಿ ಖಾತೆ ಪಡೆದ ಕೂಡಲೇ ಅದು ಕಾನೂನು ಬದ್ಧವಾಗಿ ಮಾನ್ಯವಾದ ಆಸ್ತಿ ಆಗುವುದಿಲ್ಲ. ಆಸ್ತಿಯನ್ನು ಹೊಂದಲು ಸಂಬಂಧಿಸಿದ ಸೇವೆಗಳನ್ನು ಪಡೆಯಲು ತಾತ್ಕಾಲಿಕ ದಾಖಲೆಯಾಗಿ ಪರಿಗಣಿತವಾಗುತ್ತದೆ. ಮಾಲೀಕತ್ವದ ದಾಖಲೆಗಳು ಇದ್ದರೂ ಸಹ ಅಕ್ರಮ ಆಸ್ತಿ ಎಂದೇ ಲೆಕ್ಕ. ಎಲ್ಲ ಬ್ಯಾಂಕ್ಗಳು ಸಾಲ ಕೊಡಲ್ಲ, ಕೆಲವು ಹಣಕಾಸು ಸಂಸ್ಥೆಗಳು ಬಿ ಖಾತೆಯನ್ನೂ ಪರಿಗಣಿಸುತ್ತವೆ. ಇನ್ನು ಬಿ ಖಾತೆ ಆಧಾರದಲ್ಲಿ ತೆರಿಗೆ ಪಾವತಿಸಿ ಕೆಲವು ಸೌಲಭ್ಯಗಳ ಅವಕಾಶ ಪಡೆಯಬಹುದು.