ನ್ಯೂಸ್

ವಿಚ್ಛೇದಿತಳಾಗಿ ತವರಿಗೆ ಬಂದಿದ್ದ ಸೋದರಿಯನ್ನು ಬರ್ಬರವಾಗಿ ಕೊಂದ ನಾಲ್ವರು ಸೋದರರು...

ಥಾಣೆ: ಪತಿಯಿಂದ ವಿಚ್ಛೇದಿತಳಾಗಿ ಬಂದು ತವರು ಸೇರಿಕೊಂಡಿದ್ದ ಯುವತಿಯನ್ನು ಆಕೆಯ ನಾಲ್ವರು ಸಹೋದರರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ ಎರಡು ತಿಂಗಳ ಹಿಂದೆ ಘಟನೆ ನಡೆದಿದ್ದು, ಇದೀಗ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇನ್ನೊಬ್ಬನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ಮೃತಳ ಹೆಸರು ಪ್ರತಿಭಾ ಮಹಾತ್ರೆ (29). ಈಕೆ ಪತಿಯಿಂದ ವಿಚ್ಛೇದಿತರಾದ ಬಳಿಕ ದೈಘಡ್​​ನಲ್ಲಿರುವ ಸೋದರರ ಮನೆಗೆ ಬಂದು ಉಳಿದುಕೊಂಡಿದ್ದರು. ಹಾಗೇ ಬಿಯರ್ ಬಾರ್​ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಆದರೆ ಆಕೆಯ ನಡತೆ ಬಗ್ಗೆ ಅಪಸ್ವರ ಎದ್ದಿತ್ತು. ಇದು ಸೋದರರ ಕಿವಿಗೂ ಬಂದು ತಲುಪಿತ್ತು. ಈ ವಿಚಾರಕ್ಕೆ ಅವರ ಮಧ್ಯೆ ಪದೇಪದೆ ಜಗಳ ಆಗುತ್ತಿತ್ತು. ನೀನು ಬೇರೆ ಮನೆಗೆ ಹೋಗಿ ಇರು..ನಮ್ಮೊಂದಿಗೆ ಇರುವುದು ಬೇಡ ಎಂದು ಸೋದರರು ಪ್ರತಿಭಾ ಮೇಲೆ ಕೂಗಾಡುತ್ತಿದ್ದರು. ಇದನ್ನೂ ಓದಿ: ಛೇ… ವಯಸ್ಸಾಗೋಯ್ತು ಅಂತ ಮರುಗುವವರಿಗೆ ವಿಜ್ಞಾನಿಗಳು ಕೊಟ್ಟಿದ್ದಾರೆ ಸಿಹಿಸುದ್ದಿ

ಆದರೆ ಪ್ರತಿಭಾ ಅವರ ಮಾತಿಗೆ ಜಗ್ಗಿರಲಿಲ್ಲ. ಎಷ್ಟು ಹೇಳಿದರೂ ಕೇಳದ ಸೋದರಿಯನ್ನು ನಾಲ್ವರು ಸೋದರರು ಸೇರಿ ಮೇ 1ರ ಮಧ್ಯರಾತ್ರಿ ಕೊಲೆ ಮಾಡಿದ್ದಾರೆ. ಅವಳ ಕತ್ತು ಹಿಸುಕಿ ಕೊಂದ ನಂತರ ಮೃತದೇಹವನ್ನು ಪ್ಲಾಸ್ಟಿಕ್​ ಚೀಲದಲ್ಲಿ ಹಾಕಿ, ಮನೆಯಿಂದ ಸ್ವಲ್ಪ ದೂರ ಇರುವ ಕಾಡಿನಂತಹ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟುಹಾಕಿದ್ದಾರೆ. ವಿಚಾರಣೆ ವೇಳೆ ಇದನ್ನೆಲ್ಲ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಈ ಸಾವಿನ ಬಗ್ಗೆ ಕೆಲವು ದೂರುಗಳು ಬಂದ ನಂತರ ಪೊಲೀಸರು ತನಿಖೆ ನಡೆಸಲು ಶುರು ಮಾಡಿದ್ದರು. ಆರೋಪಿಗಳನ್ನು ನಾಥಾ ಅಶೋಕ್​ ಪಾಟೀಲ್​, ಭಗವಾನ್​ ಅಶೋಕ್ ಪಾಟೀಲ್​, ಬಾಲಾಜಿ ಅಶೋಕ್​ ಪಾಟೀಲ್​ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಪಾಂಡುರಂಗ ಅಶೋಕ್​ ಪಾಟೀಲ್​ ಎಂಬಾತ ಪರಾರಿಯಾಗಿದ್ದಾನೆ. (ಏಜೆನ್ಸೀಸ್​)