ಮುಂಬೈ: ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಆಭರಣದಂಗಡಿ ಕೆಲಸಗಾರರ ಬಳಿ 2.62 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ದೋಚಿದ ಆರೋಪದ ಮೇಲೆ ಮುಂಬೈ ಪೊಲೀಸರು ಮೂವರನ್ನು ಬಂಧಿಸಿದ್ಧಾರೆ.
ಪ್ರಕರಣ ಸಂಬಂಧ ಆರೋಪಿಗಳಾದ ಪ್ರಶಾಂತ್ ಚೌಧರಿ, ಮಹೇಂದರ್ ಚಂದ್ಮಲ್ ಜಾಟ್ ಮತ್ತು ಮನೋಜ್‌ಕುಮಾರ್ ಜೈತ್ ಸಿಂಗ್ ಎಂದು ತಿಳಿದು ಬಂದಿದೆ. ಇನ್ನಿಬ್ಬರು ಆರೋಪಿಗಳು ತಲೆಮಾರಿಸಿಕೊಂಡಿದ್ದು ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಬಂಧಿತ ಆರೋಪಿ ಪ್ರಶಾಂತ್ ಚೌಧರಿ ಹಾಗೂ ಆತನ ಅಂಕಲ್ ಹರಿರಾಮ್ ಹೈದರಾಬಾದಿನ ನರೇಡಿ ಜ್ಯೂವಲರ್ಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಇಬ್ಬರಿಗೂ ಅಂಗಡಿಯ ಮಾಲೀಕರು ಮುಂಬೈಗೆ ತೆರಳಿ ಚಿನ್ನದ ಬಿಸ್ಕೆಟ್, ನಗದು ಹಾಗೂ ವಜ್ರಗಳನ್ನು ಡೆಲಿವರಿ ಮಾಡಿ ವಾಪಸ್ ಬರುವಂತೆ ಸೂಚಿಸಿದ್ದರು.
ಆಭರಣದ ಮೌಲ್ಯವನ್ನು ತಿಳಿದ ಪ್ರಶಾಂತ್ ತನ್ನ ಸಹಚರರಾದ ಮಹೇಂದರ್ ಹಾಗೂ ಮನೋಜ್ಗೆ ಮುಂಬೈಗೆ ತೆರಳುತ್ತಿರುವುದಾಗಿ ವಿಚಾರವನ್ನು ತಿಳಿಸಿ ದರೋಡೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಮೇ 30ರಂದು ರಾತ್ರಿ ಹೈದರಾಬಾದಿನಿಂದ ಹೊರಟು ಮಾರನೆಯ ದಿನ ಬೆಳಗ್ಗೆ 8:30ರ ಸುಮಾರಿಗೆ ಮುಂಬೈನ ಸಿಯಾನ್ ಸರ್ಕಲ್ನಲ್ಲಿ ಬಸ್ನಿಂದ ಇಳಿದಿದ್ದಾರೆ.
ಬಸ್ನಿಂದ ಇಳಿದ ತಕ್ಷಣ ಮಹೇಂದರ್, ಮನೋಜ್ ಸೇರಿದಂತೆ ಇನ್ನಿಬ್ಬರು ಹರಿರಾಮ್ ಹಾಗೂ ಪ್ರಶಾಂತ್ನನ್ನು ಸುತ್ತುವರೆದಿದ್ದು ತಾವು ದೆಹಲಿ ಪೊಲೀಸರು ಎಂದು ಹೇಳಿ ಅವರ ಕಾರನ್ನು ಹತ್ತಿಸಿಕೊಂಡಿದ್ದಾರೆ. ಕೆಲ ದೂರ ಕ್ರಮಿಸಿದ ಬಳಿಕ ಆರೋಪಿಗಳು ಆಭರಣದ ಅಂಗಡಿ ನೌಕರರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ತಮ್ಮ ಬಳಿ ಇದ್ದ ಬ್ಯಾಗ್ ಕಸಿದು ಸಂತ್ರಸ್ತರನ್ನು ಥಾಣೆಯ ಗಣೇಶ್ಪುರಿ ಪ್ರದೇಶದಮಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು ಪ್ರಶಾಂತ್ ಹೆಣೆದ ದರೋಡೆಯ ಭಾಗವಾಗಿದ್ದರು. ಪೊಲೀಸರಂತೆ ಪೋಸ್ ನೀಡಲು ಆರೋಪಿಗಳು ಕಾರ್ ಒಂದನ್ನು ಬಾಡಿಗೆಗೆ ಪಡೆದಿದ್ದರು. ನಂತರ ಹೊಸ ಫೋನ್ ಹಾಗೂ ಸಿಮ್ ಖರೀದಿಸಿದ್ದ ಖದೀಮರು ಪ್ರಶಾಂತ್ನಿಂದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದರು.
ತನಿಖೆ ವೇಳೆ ಮುಂಬೈ ಪೊಲೀಸರು ಆರೋಪಿಗಳು ಬಳಸಿದ್ದು ನಕಲಿ ಕಾರ್ ಎಂಬ ಅಂಶವನ್ನು ಬಯಲಿಗೆಳೆದಿದ್ದಾರೆ. ರಾಜಸ್ಥಾನ ನೋಂದಣಿ ಹೊಂದಿದ್ದ ಗಾಡಿಯ ನಂಬರ್ ಪ್ಲೇಟ್ಅನ್ನು ಆರೋಪಿಗಳು ತಮಿಳುನಾಡಿನ ಸಂಖ್ಯೆ ನಮೂದಿಸಿಸಿದ್ದರು. ಹೈದರಾಬಾದಿನಿಂದ ಬಸ್ಅನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಮುಂಬೈನ ಸಿಯಾನ್ ಸರ್ಕಲ್ನಲ್ಲಿ ಇಬ್ಬರನ್ನು ಅಪಹರಿಸಿ ಆಭರಣಗಳನ್ನು ಕಸಿದಿದ್ದರು.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜೋನ್4 ಡಿಸಿಪಿ ಪ್ರಶಾಂತ್ ಕದಂ ಆಭರಣದ ಅಂಗಡಿಯವರು ದಾಖಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೊದಲಿಗೆ ಆರೋಪಿಗಳು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿರುವುದು ಗೊತ್ತಾಗಿದೆ. ಸಿಸಿಟವಿ ದೃಶ್ಯಾವಳಿಗಳ ಆಧಾರದ ಮೇಲೆ ಕೃತ್ಯಕ್ಕೆ ಬಳಸಿದ್ದ ಕಾರ್ ಪರಿಶೀಲಿಸಿದಾಗ ವಾಹ ತಮಿಳುನಾಡಿದ ತಿರುಪ್ಪೂರಿನಲ್ಲಿರುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
ಸ್ಥಳೀಯ ಪೊಲೀಸರ ಸಹಾಯದಿಂದ ಕಾರಿನ ಮಾಲೀಕರನ್ನು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳಿಂದ 1 ಕೋಟಿ ರೂ. ಬೆಲೆ ಬಾಳುವ 600 ಗ್ರಾಂ ವಜ್ರಾಭರಣ, 1 ಸಾವಿರ ಗ್ರಾಂ ಚಿನ್ನ, 2 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮಾರಿಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಜೋನ್4 ಡಿಸಿಪಿ ಪ್ರಶಾಂತ್ ಕದಂ ತಿಳಿಸಿದ್ದಾರೆ.