ವಾಷಿಂಗ್ಟನ್ : ಮಾದಕ ವಸ್ತು ಕಳ್ಳಸಾಗಾಣೆ ಮಾಡುತ್ತಿದ್ದ ಜಲಾಂತರ್ಗಾಮಿ ನೌಕೆಯನ್ನು ಅಮೆರಿಕ ಸೇನೆ ಹೊಡೆದುರುಳಿಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( Donald Trump ) ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ರೂಥ್ನಲ್ಲಿ ಈ ವಿಚಾರವನ್ನು ಟ್ರಂಪ್ ತಿಳಿಸಿದ್ದಾರೆ. ಇತ್ತೀಚೆಗೆ ಕೆರಿಬಿಯನ್‌ನಲ್ಲಿ ನಡೆದ ಅಮೆರಿಕದ ಮಿಲಿಟರಿ ದಾಳಿಯಲ್ಲಿ ದೊಡ್ಡ ಮಾದಕವಸ್ತು ಜಲಾಂತರ್ಗಾಮಿ ನೌಕೆ ನಾಶವಾಗಿದೆ ಮತ್ತು ಈ ದಾಳಿಯಲ್ಲಿ ಇಬ್ಬರು ಮಾದಕವಸ್ತು ಭಯೋತ್ಪಾದಕರು ಮೃತಪಟ್ಟಿದ್ದರೆ, ಇಬ್ಬರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ದಾಳಿಯ ವಿಡಿಯೋವನ್ನು ಸಹ ಹಂಚಿಕೊಂಡಿರುವ ಟ್ರಂಪ್, ಜಲಾಂತರ್ಗಾಮಿ ನೌಕೆಯಲ್ಲಿ ದೊಡ್ಡ ಪ್ರಮಾಣದ ಫೆಂಟನಿಲ್ ಮತ್ತು ಇತರ ಮಾದಕವಸ್ತುಗಳಿದ್ದವು. ನೌಕೆಯು ಯುನೈಟೆಡ್ ಸ್ಟೇಟ್ಸ್ ಕಡೆಗೆ ಬರುತ್ತಿದ್ದವು ಮತ್ತು ಅದನ್ನು ತಡೆಹಿಡಿಯುವ ಮೂಲಕ 25,000 ಅಮೆರಿಕನ್ನರ ಸಾವನ್ನು ತಡೆಯಲಾಯಿತು ಎಂದು ಟ್ರಂಪ್ ಹೇಳಿದ್ದಾರೆ.
ಅಂದಹಾಗೆ, ಸೆಪ್ಟೆಂಬರ್‌ನಿಂದ ಕೆರಿಬಿಯನ್‌ನಲ್ಲಿ ಅಮೆರಿಕದ ದಾಳಿಗೆ ಕನಿಷ್ಠ ಆರು ಹಡಗುಗಳು ನಾಶವಾಗಿವೆ. ಅವುಗಳಲ್ಲಿ ಹೆಚ್ಚಿನವು ಸ್ಪೀಡ್‌ಬೋಟ್‌ಗಳಾಗಿದ್ದು, ಕೆಲವು ವೆನೆಜುವೆಲಾದಿಂದ ಬಂದಿವೆ ಎಂದು ಹೇಳಲಾಗಿದೆ. ನಮ್ಮ ಖಡಕ್ ಕಾರ್ಯಾಚರಣೆಯು ಮಾದಕವಸ್ತು ಕಳ್ಳಸಾಗಣೆಗೆ ಭಾರಿ ಪೆಟ್ಟು ನೀಡುತ್ತಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಆದರೆ, ಇಲ್ಲಿಯವರೆಗೂ ಹತ್ಯೆಗೀಡಾದ 27 ಜನರು ಮಾದಕವಸ್ತು ಕಳ್ಳಸಾಗಣೆದಾರರು ಎಂಬುದಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.
ದೃಢೀಕೃತ ಮಾದಕವಸ್ತು ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡರೂ ಸಹ, ಇಂತಹ ಸಾಮೂಹಿಕ ಹತ್ಯೆಗಳು ಕಾನೂನುಬಾಹಿರವೆಂದು ತಜ್ಞರು ಹೇಳುತ್ತಿದ್ದಾರೆ. ಅಲ್ಲದೆ, ಮಾದಕವಸ್ತು ತುಂಬಿತ್ತು ಎನ್ನಲಾದ ಜಲಾಂತರ್ಗಾಮಿ ನೌಕೆ ಎಲ್ಲಿಗೆ ಹೋಗುತ್ತಿತ್ತು ಎಂಬುದನ್ನು ಸಹ ಅಮೆರಿಕ ಬಹಿರಂಗಪಡಿಸಿಲ್ಲ. ಆದರೆ, ಅಮೆರಿಕ ಮಾದಕ ವಸ್ತುಗಳ ಕಳ್ಳಸಾಗಾಣೆ ತಡೆದಿರುವುದಾಗಿ ಘೋಷಿಸಿದೆ. (ಏಜೆನ್ಸೀಸ್)