ನ್ಯೂಸ್

Gujarat | ಗುಜರಾತ್​ನ ನೂತನ ಸಚಿವರಿಗೆ ಖಾತೆ ಹಂಚಿಕೆ; ಜಡೇಜಾ ಪತ್ನಿ ರಿವಾಬಾಗೆ ಪ್ರಮುಖ ಜವಾಬ್ದಾರಿ

Gandhinagara: ಇಂದು (ಶುಕ್ರವಾರ ಅ 17) ಮುಂಜಾನೆ ಗುಜರಾತ್‌ನ ಸರ್ಕಾರದ (Gujarat) ಹೊಸ ಸಚಿವ ಸಂಪುಟ ಪ್ರಮಾಣವಚನ ಸ್ವೀಕರಿಸಿದ್ದು, ಆ ಎಲ್ಲಾ ನೂತನ ಸಚಿವರಿಗೂ ಖಾತೆಗಳನ್ನು ಘೋಷಿಸಲಾಗಿದ್ದು, ಉಪಮುಖ್ಯಮಂತ್ರಿ ಹರ್ಷ ಸಂಘವಿ ಪ್ರಮುಖ ಇಲಾಖೆ ಗೃಹ ಸಚಿವಾಲಯವನ್ನು ಉಳಿಸಿಕೊಂಡರೆ, ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರನ್ನಾಗಿ ನೇಮಿಸಲಾಗಿದೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಾಮಾನ್ಯ ಆಡಳಿತ, ಆಡಳಿತ ಸುಧಾರಣೆಗಳು ಮತ್ತು ತರಬೇತಿ, ಯೋಜನೆ, ಅನಿವಾಸಿ ಗುಜರಾತಿಗಳ ವಿಭಾಗ, ಕಂದಾಯ ಮತ್ತು ವಿಪತ್ತು ನಿರ್ವಹಣೆ ಮತ್ತು ರಸ್ತೆಗಳು, ಕಟ್ಟಡಗಳು ಮತ್ತು ರಾಜಧಾನಿ ಖಾತೆಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಡಿಸಿಎಂ ಸಾಂಘವಿ ಪೊಲೀಸ್, ವಸತಿ, ಜೈಲು, ಗಡಿ ಭದ್ರತೆ ಮತ್ತು ಇತರ ಖಾತೆಗಳನ್ನು ಪಡೆದುಕೊಂಡಿದ್ದು, ಕನುಭಾಯಿ ಪಟೇಲ್ ಹಣಕಾಸು ಸಚಿವರಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಋಷಿಕೇಶ್ ಗಣೇಶ್‌ಭಾಯ್ ಪಟೇಲ್ ಇಂಧನ ಮತ್ತು ಪೆಟ್ರೋಕೆಮಿಕಲ್ಸ್, ಪಂಚಾಯತ್ ಮತ್ತು ಗ್ರಾಮೀಣ ವಸತಿ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ.

ಗುಜರಾತ್ ಸರ್ಕಾರದ ಇತ್ತೀಚಿನ ಸಚಿವ ಸಂಪುಟ ಪುನರಚನೆಯ ಬಳಿಕ ಮೊದಲ ಸಂಪುಟ ಸಭೆ ಇಂದು ಗಾಂಧಿನಗರದಲ್ಲಿ ನಡೆಯಿತು. ಜನರ ಹಿತದೃಷ್ಟಿಯಿಂದ ಹೆಚ್ಚಿನ ಸಾರ್ವಜನಿಕ ಅಭಿವೃದ್ದಿ ಯೋಜನೆಗಳನ್ನು ಕೈಗೊಳ್ಳಬೇಕೆಂದು ಎಲ್ಲಾ ಸಚಿವರಿಗೆ ಮಾರ್ಗದರ್ಶನ ನೀಡುವತ್ತ ಸಭೆ ಗಮನಹರಿಸಿದೆ ಎಂದು ಉಪಮುಖ್ಯಮಂತ್ರಿ ಹರ್ಷ ಸಂಘವಿ ಹೇಳಿದರು. ಹೆಚ್ಚುವರಿಯಾಗಿ, ಕಾಮನ್‌ವೆಲ್ತ್ 2030 ಕ್ರೀಡಾಕೂಟವನ್ನು ಆಯೋಜಿಸಲು ಅಹಮದಾಬಾದ್ ಸಜ್ಜಾಗುತ್ತಿರುವಾಗ, ಆಯೋಜನಾ ಸಮಿತಿಯು ಸಿದ್ಧತೆಗಳಿಗೆ ಹಸಿರು ನಿಶಾನೆ ತೋರಿಸುವುದರೊಂದಿಗೆ ಮುಖ್ಯಮಂತ್ರಿಗಳು ರಾಜ್ಯದ ಕ್ರೀಡಾ ಇಲಾಖೆಯನ್ನು ಅಭಿನಂದಿಸಿದರು.(ಏಜೆನ್ಸೀಸ್​)