Identity Theft: ಸರ್ಕಾರ ಘೋಷಿಸುವ ಹಲವಾರು ಯೋಜನೆಗಳು ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಮಹತ್ವದ ಉದ್ದೇಶದಿಂದ ಜಾರಿಗೆ ತರಲಾಗುತ್ತವೆ. ಅವುಗಳಲ್ಲಿ ಬಹುತೇಕ ಯೋಜನೆಗಳು ಬಡ ವರ್ಗಕ್ಕೆ ಮೀಸಲಾಗಿರುತ್ತವೆ. ಕಡಿಮೆ ಹಾಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯ, ಸಾರಿಗೆ ಸೌಕರ್ಯಗಳು ಸೇರಿದಂತೆ ಇತರೆ ಯೋಜನೆಗಳು ಜನರ ಜೀವನವನ್ನು ಸುಗುಮಗೊಳಿಸಲಿ ಎಂಬುದು ಆಯಾ ಯೋಜನೆಯ ಮುಖ್ಯ ಗುರಿ. ಇಂತಹ ಯೋಜನೆಗಳಿಗೆ ಲಕ್ಷಾಂತರ ಫಲಾನುಭವಿಗಳಿದ್ದಾರೆ. ಆದ್ರೆ, ಇದನ್ನು ಬಡವರ ಹೆಸರಿನಲ್ಲಿ, ಅವರ ಅರಿವಿಗೆ ಬಾರದಂತೆ ದುರುಪಯೋಗ ಪಡಿಸಿಕೊಳ್ಳುವ ಕಿಡಿಗೇಡಿಗಳಿದ್ದಾರೆ ಎಂಬ ಸಂಗತಿ ತೀರ ಕೆರಳಿಸುತ್ತದೆ. ಅದಕ್ಕೆ ಈ ಘಟನೆ ಒಂದು ಜ್ವಲಂತ ಸಾಕ್ಷಿ.
ಇದನ್ನೂ ಓದಿ: ಜಯಲಲಿತಾ ಅಂದ್ರೆ ರಜಿನಿಗೆ ಏಕೆ ಕೋಪ? ಆ ಒಂದು ಘಟನೆ… ಕೊನೆಗೂ ಅಚ್ಚರಿ ಕಾರಣ ಬಿಚ್ಚಿಟ್ಟ ತಲೈವಾ! Rajinikanth
ಆಗ್ರಾ ಜಿಲ್ಲೆಯ ಮಹಿಳೆಯೊಬ್ಬರು 2021ರಿಂದ 2023 ವರ್ಷದ ಅವಧಿಯಲ್ಲಿ ಅಂದರೆ ಈ ವರ್ಷಗಳ ಅಂತರದಲ್ಲಿ 30 ತಿಂಗಳಲ್ಲಿ 25 ಬಾರಿ ಹೆರಿಗೆ ಮಾಡಿಸಿಕೊಂಡಿದ್ದು, ಐದು ಬಾರಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಒಬ್ಬ ಬಡ ಹೆಣ್ಣು ಮಗಳು ಇಷ್ಟು ಬಾರಿ ಹೆರಿಗೆ ಮಾಡಿಸಿಕೊಳ್ಳಲು ಹೇಗೆ ಸಾಧ್ಯ? ಎಂದು ಅನುಮಾನಗೊಂಡ ಆರೋಗ್ಯ ಇಲಾಖೆ, ದಾಖಲೆಗಳ ಬುಡಕ್ಕೆ ಕೈಹಾಕಿದಾಗ ಅಸಲಿ ಕಥೆ ಬಟಾಬಯಲಾಗಿದೆ. 45,000 ರೂ. ಸರ್ಕಾರಿ ಯೋಜನೆ ಪರಿಹಾರ ಹಣವನ್ನು ಪಡೆದಿರುವ ಹೆಣ್ಣು ಮಗಳು, ಒಂದಲ್ಲ, ಎರಡಲ್ಲ ಹಲವು ಬಾರಿ ಹೆರಿಗೆ ಮಾಡಿಸಿಕೊಂಡಿರುವುದಕ್ಕೆ ಉತ್ತರ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲೆಗಳಿವೆ ಎಂದು ವರದಿ ಬಹಿರಂಗಪಡಿಸಿವೆ.
ಇತ್ತೀಚೆಗೆ ನಡೆದ ಲೆಕ್ಕಪರಿಶೋಧನೆಯಲ್ಲಿ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ನಡೆಸುವ ಯೋಜನೆಗಳ ಅಡಿಯಲ್ಲಿ ವಂಚನೆಯ ಹಕ್ಕುಗಳು ಪರಿಶೀಲನೆ ನಡೆಸಿದಾಗ ಇದು ಮೋಸದ ಜಾಲ ಎಂಬುದು ದೃಢವಾಗಿದೆ. ಇಲ್ಲಿ ನಮೂದಿಸಲಾದ ಮಹಿಳೆಯ ಹೆಸರು ಅಸಲಿ ಮಹಿಳೆಯದ್ದು. ಆದರೆ, ಹೆರಿಗೆ ಮಾಡಿಸಿಕೊಂಡಿರುವುದು, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಅಕ್ಷರಶಃ ಸುಳ್ಳು ಎನ್ನಲಾಗಿದೆ. ಸಮುದಾಯ ಆರೋಗ್ಯ ಇಲಾಖೆ ಕೇಂದ್ರದ ಸಿಬ್ಬಂದಿಗಳೇ ಮಹಿಳೆಯ ಹೆಸರಿನಲ್ಲಿ ನಕಲು ಮಾಡಿ, ಸರ್ಕಾರಿ ಯೋಜನೆಯ ಹಣಕ್ಕಾಗಿ ಇಂತಹ ಕಿಡಿಗೇಡಿ ಕೆಲಸಕ್ಕೆ ಕೈಹಾಕಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಯೋಜನೆಯ ಹೆಸರಿನಲ್ಲಿ ಹಣ ಪಡೆಯುವುದರ ಹಾಗೂ ಪಡೆದಿರುವ ಬಗ್ಗೆ ಯಾವುದೇ ಅರಿವಿಲ್ಲದ ಮಹಿಳೆಯನ್ನು ಕೃಷ್ಣ ಕುಮಾರಿ (35) ಎಂದು ಗುರುತಿಸಲಾಗಿದೆ. ಈಕೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್ ಖಾತೆ ತೆರೆದು, ಅದಕ್ಕೆ ಸರ್ಕಾರ ಕೊಟ್ಟ ಹಣವನ್ನು ವರ್ಗಾಯಿಸಲಾಗಿದೆ. ಹಗರಣಕ್ಕಾಗಿ ಬಡ ಮಹಿಳೆಯ ಗುರುತನ್ನು ಇಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಸಿಬ್ಬಂದಿಗಳ ಜಾಲ ಪತ್ತೆಯಾದ ಬೆನ್ನಲ್ಲೇ ನಾಲ್ವರು ಆರೋಗ್ಯ ಸಿಬ್ಬಂದಿ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಪ್ರಸ್ತುತ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ಪನ ಪಾಲನೆಗೆ ನಿರ್ಲಕ್ಷ್ಯ ತೋರಿದ ಮಗಳನ್ನು ಮನೆಯಿಂದ ಹೊರಗೆ ಹಾಕಿಸಿದ ಅಧಿಕಾರಿಗಳು, ವೃದ್ಧನಿಗೆ ಆಶ್ರಯ
ಐದನೇ ಆರೋಪಿ ಕೃಷ್ಣ ಕುಮಾರಿ ವಾಸಿಸುವ ನಾಗ್ಲಾ ಕದಮ್ ಎಂಬ ಗ್ರಾಮದ ಏಜೆಂಟ್ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಈತ ಇಲ್ಲಿನ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದು, ಕೃಷ್ಣ ಕುಮಾರಿ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು, ಯೋಜನೆಯಡಿಯಲ್ಲಿ ಸರ್ಕಾರಿ ನೀಡಿದ ಹಣವನ್ನೆಲ್ಲ ಈ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಒಪ್ಪಂದದ ಮೇರೆಗೆ ಈ ನಾಲ್ವರು ಆರೋಪಿಗಳನ್ನು ಫತೇಹಾಬಾದ್ ಸಿಎಚ್‌ಸಿಯಲ್ಲಿ ನಿಯೋಜಿಸಲಾಗಿತ್ತು. ಆದರೆ, ಐದನೇ ಆರೋಪಿ ಮಾತ್ರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಆಗಿರಲಿಲ್ಲ. ಈತ ಹೊರಗಿನವನಾಗಿದ್ದ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಇದೇ ಮೊದಲ ಪ್ರಕರಣನಾ? ಅಥವಾ ಇಂತಹ ಹೆಚ್ಚಿನ ಪ್ರಕರಣಗಳು ಇನ್ನೂ ಇವೆಯಾ? ಎಂಬುದನ್ನು ತಿಳಿಯಲು ತನಿಖೆ ಚುರುಕುಗೊಂಡಿದೆ ಎಂದು ಸಿಎಂಒ ಅರುಣ್ ಶ್ರೀವಾಸ್ತವ ಹೇಳಿದ್ದಾರೆ.
ಈ ಹಗರಣವು ಎನ್ಎಚ್ಎಂನ (NHM) 'ಜನನಿ ಸುರಕ್ಷಾ ಯೋಜನೆ' ಅಡಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರ ಹೆರಿಗೆಗೆ 1,400 ರೂ., ನಗರದಲ್ಲಿನ ಮಹಿಳೆಯರ ಹೆರಿಗೆಗೆ 1,000 ರೂ. ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗೆ 2,000 ರೂ. ಹಣವನ್ನು ಈ ಯೋಜನೆ ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಗೌರವ್ ಥಾಪಾ (ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್), ನೀರಜ್ ಅವಸ್ಥಿ (ಬ್ಲಾಕ್ ಅಕೌಂಟಿಂಗ್ ಮ್ಯಾನೇಜರ್), ಗೌತಮ್ ಸಿಂಗ್ (ಡೇಟಾ ಎಂಟ್ರಿ ಆಪರೇಟರ್) ಮತ್ತು ಅಜರ್ ಅಹ್ಮದ್ (ಮತ್ತೊಂದು ಸಿಎಚ್‌ಸಿಯಲ್ಲಿ ಡೇಟಾ ಎಂಟ್ರಿ ಆಪರೇಟರ್) ಎಂಬುವವರನ್ನು ಏಜೆಂಟ್ ಅಶೋಕ್ ಕುಮಾರ್ ಜತೆಗೆ ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).