ನ್ಯೂಸ್

ತನ್ನ ಗರ್ಭಕ್ಕೆ 13 ವರ್ಷದ ವಿದ್ಯಾರ್ಥಿ ಕಾರಣ ಗರ್ಭಪಾತಕ್ಕೆ ಅನುಮತಿ ಕೊಡಿ ಅಂತ ಕೋರ್ಟ್​ ಮೆಟ್ಟಿಲೇರಿದ ಶಿಕ್ಷಕಿ! Teacher

Teacher: ತನ್ನ ಗರ್ಭಕ್ಕೆ 13 ವರ್ಷದ ವಿದ್ಯಾರ್ಥಿಯೇ ಕಾರಣ ಎಂದು ಹೇಳಿದ 23 ವರ್ಷದ ಶಿಕ್ಷಕಿಯೊಬ್ಬಳು ಇದೀಗ ಗರ್ಭಪಾತಕ್ಕಾಗಿ ಕೋರ್ಟ್​ ಮೊರೆ ಹೋಗಿರುವ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ.

ಸದ್ಯ ಶಿಕ್ಷಕಿಯನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿಸಲಾಗಿದೆ. ಟ್ಯೂಷನ್‌ಗೆ ಬರುತ್ತಿದ್ದ 13 ವರ್ಷದ ವಿದ್ಯಾರ್ಥಿಯನ್ನು ಪುಸಲಾಯಿಸಿ, ಪ್ರೀತಿಯ ಬಲೆಯಲ್ಲಿ ಬೀಳಿಸಿ, ಆತನನ್ನು ಅಪಹರಿಸಿದ ಬಳಿಕ ಏಪ್ರಿಲ್ 29ರಂದು ಶಿಕ್ಷಕಿಯನ್ನು ಬಂಧಿಸಲಾಯಿತು. ಸುಮಾರು ಆರು ದಿನಗಳ ಹುಡುಕಾಟದ ನಂತರ ಪೊಲೀಸರು ಇಬ್ಬರನ್ನು ಪತ್ತೆ ಮಾಡಿದರು. 13 ವರ್ಷದ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕಿಯನ್ನು ಬಂಧಿಸಲಾಗಿದೆ.

ಆರೋಪಿ ಶಿಕ್ಷಕಿ ಪ್ರಸ್ತುತ ಸೂರತ್ ಜೈಲಿನಲ್ಲಿದ್ದಾಳೆ. ತನ್ನ ಗರ್ಭಧಾರಣೆಗೆ 13 ವರ್ಷದ ವಿದ್ಯಾರ್ಥಿಯೇ ಕಾರಣ ಎಂದು ಶಿಕ್ಷಕಿ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಪೊಲೀಸರು, ಡಿಎನ್ಎ ಪರೀಕ್ಷೆ ನಡೆಸುವ ಪ್ರಕ್ರಿಯೆಯಲ್ಲಿದ್ದರು. ಇದರ ನಡುವೆ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಗರ್ಭದಲ್ಲಿರುವ ಮಗುವಿನ ಮತ್ತು ತನ್ನ ಜೀವಕ್ಕೆ ಅಪಾಯವಿದೆ. ಹೆರಿಗೆಯ ಸಮಯದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಗರ್ಭಪಾತಕ್ಕೆ ಅನುಮತಿ ನೀಡಿ ಎಂದು ಶಿಕ್ಷಕಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ. ಈ ಘಟನೆಯ ಕುರಿತು ನ್ಯಾಯಾಲಯವು ಪೊಲೀಸರಿಂದ ವರದಿ ಕೇಳಿದೆ.

23 ವರ್ಷದ ಶಿಕ್ಷಕಿ ಸುಮಾರು ಐದು ವರ್ಷಗಳಿಂದ ಬಾಲಕನಿಗೆ ಟ್ಯೂಷನ್ ನೀಡುತ್ತಿದ್ದಳು. ಏಪ್ರಿಲ್ 26 ರಂದು ಇಬ್ಬರೂ ನಾಪತ್ತೆಯಾಗಿದ್ದರು. ಬಳಿಕ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಶಿಕ್ಷಕಿ, ತಮ್ಮ ಮಗನನ್ನು ಅಪಹರಿಸಿದ್ದಾಳೆ ಎಂದು ಆರೋಪಿಸಿದ್ದರು. ರಾಜಸ್ಥಾನದ ಜೈಪುರದಿಂದ ಐಷಾರಾಮಿ ಬಸ್‌ನಲ್ಲಿ ಗುಜರಾತ್‌ಗೆ ಇಬ್ಬರೂ ಹಿಂತಿರುಗುತ್ತಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಇದರ ನಂತರ, ಸೂರತ್ ಪೊಲೀಸರು ಬಸ್ ಅನ್ನು ತಡೆದು ಶೋಧ ನಡೆಸಿದಾಗ ಶಿಕ್ಷಕಿ ಮತ್ತು ವಿದ್ಯಾರ್ಥಿ ಪತ್ತೆಯಾದರು.

ಅಂದಹಾಗೆ ಆರೋಪಿ ಶಿಕ್ಷಕಿ, 13 ವರ್ಷದ ಬಾಲಕನನ್ನು ಪ್ರೀತಿಸುತ್ತಿದ್ದಳು. ಆ ಬಾಲಕನೊಂದಿಗೆ ಆಕೆ ದೈಹಿಕ ಸಂಬಂಧವನ್ನೂ ಹೊಂದಿದ್ದಳು. ಇದೀಗ ಶಿಕ್ಷಕಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಅಪಹರಣಕ್ಕೂ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆಕೆ ಜೈಲಿನಲ್ಲಿದ್ದಾಳೆ. (ಏಜೆನ್ಸೀಸ್​)