ನ್ಯೂಸ್

ಮನೆಮಾಲೀಕನಿಲ್ಲದ ವೇಳೆ ಅವರ ಪತ್ನಿ ಮೇಲೆ ಅತ್ಯಾಚಾರವೆಸಗಿದ!

ನೋಯ್ಡಾ: ಜಹಾಂಗೀರ್​ ಪುರದ ಜೇವರ್ ಪ್ರದೇಶದಲ್ಲಿ 23 ವರ್ಷದ ಯುವಕನೊಬ್ಬ ಮನೆ ಮಾಲೀಕನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದು, ಕೊಲೆ ಬೆದರಿಕೆ ಹಾಕಿರುವುದಾಗಿ ಗುರುವಾರ ದೂರು ದಾಖಲಾಗಿದೆ. ಆರೋಪಿಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಆತನ ಕಟ್ಟಡ ನಿರ್ಮಾಣ ಕಾರ್ಮಿಕ. ಆರೋಪಿ ವಿಶಾಲ್ ಇವರ ಮನೆಯಲ್ಲೇ ಬಾಡಿಗೆಗೆ ಇದ್ದಾನೆ.

ಮನೆ ಮಾಲೀಕನ ಪತ್ನಿ ಕೊಟ್ಟ ದೂರಿನ ವಿವರ ಹೀಗಿದೆ- ಪತಿ ಕೆಲಸದ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದು, ಲಾಕ್​ಡೌನ್ ಆಗಿರುವ ಕಾರಣ ಹಿಂದಿರುಗಿಲ್ಲ. ಏಪ್ರಿಲ್​ನಿಂದ ಅವರು ಅಲ್ಲೇ ಬಾಕಿಯಾಗಿದ್ದಾರೆ. ಮನೆಯಲ್ಲಿ ತಾನು ಮತ್ತು ಇಬ್ಬರು ಮಕ್ಕಳಷ್ಟೇ ಇದ್ದು, ಅತ್ಯಾಚಾರದ ಘಟನೆ ನಡೆದು ಕೆಲವು ದಿನಗಳಾಗಿವೆ. ವಿಶಾಲ್​ನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಇದೇ ಕಾರಣಕ್ಕೆ ದೂರು ದಾಖಲಿಸುತ್ತಿದ್ದೇನೆ.

ಅಂದು ಆತ ಬಾಡಿಗೆ ಕೊಡುವುದಕ್ಕೆ ಮನೆಗೆ ಬಂದಿದ್ದ. ಹಾಗೆ ಬಂದವನು ಚಹಾ ಸ್ವೀಕರಿಸಿದ್ದು, ನನ್ನ ಚಹಾಕ್ಕೆ ಏನೋ ಬೆರೆಸಿದ. ಅದನ್ನು ಕುಡಿದ ನಂತರ ನನಗೆ ಅರೆಬೋಧಾವಸ್ಥೆಗೆ ತಪ್ಪಿದೆ. ಆಗ ಆತ ನನ್ನ ಮೈಮೇಲಿನ ಬಟ್ಟೆ ಕಳಚುತ್ತಿರುವ ಅನುಭವವಾಗಿದೆ. ಎಚ್ಚರವಾದಾಗ ಆಗಬಾರದ್ದು ಏನೋ ಆಗಿದೆ ಎಂಬುದು ಮನದಟ್ಟಾಗಿದೆ. ಈ ಬಗ್ಗೆ ಆತನಲ್ಲಿ ಕೇಳಿದಾಗ, ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ವಿಷಯ ಬಹಿರಂಗಪಡಿಸಿದರೆ ನಿನ್ನನ್ನೂ ಮತ್ತು ಇಬ್ಬರು ಮಕ್ಕಳನ್ನೂ ಸಾಯಿಸಿಬಿಡುತ್ತೇನೆ ಎಂದು ಕೊಲೆಬೆದರಿಕೆ ಹಾಕಿದ್ದಾನೆ.

ಮಹಿಳೆ ನೀಡಿದ ಈ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯ ಪತ್ತೆಗಾಗಿ ಶೋಧ ನಡೆಸಿದ್ದಾರೆ. (ಏಜೆನ್ಸೀಸ್)