ನ್ಯೂಸ್

ಶಿಕ್ಷಕರು ಮತ್ತು ಪೊಲೀಸರ ನಡುವೆ ಘರ್ಷಣೆ: 23 ಜನರಿಗೆ ಗಾಯ

ಚಂಡೀಗಢ: ಅಧಿಕ ವೇತನ ಮತ್ತು ಉದ್ಯೋಗ ಭದ್ರತೆಗಾಗಿ ಆಗ್ರಹಿಸಿ ವೃತ್ತಿಶಿಕ್ಷಣ ಶಿಕ್ಷಕರು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 15 ಜನ ಪ್ರತಿಭಟನಾಕಾರರು ಮತ್ತು 8 ಜನ ಪೊಲೀಸರಿಗೆ ತೀವ್ರ ಗಾಯಗಳುಂಟಾಗಿರುವ ಪ್ರಸಂಗ ವರದಿಯಾಗಿದೆ.

ಹರಿಯಾಣದ ಹಲವು ಜಿಲ್ಲೆಗಳಲ್ಲಿ ಹರಿಯಾಣ ವೊಕೇಷನಲ್ ಟೀಚರ್ಸ್​ ಅಸೋಸಿಯೇಷನ್​ ನೇತೃತ್ವದಲ್ಲಿ ವೃತ್ತಿಪರ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡುವಂತೆ ಹಾಗೂ ಉದ್ಯೋಗ ನೀಡುವಲ್ಲಿ ಗುತ್ತಿಗೆದಾರರ ಪಾತ್ರವನ್ನು ವಿರೋಧಿಸಿ 'ಮಹಾ ಆಂದೋಲನ್​' ನಡೆಯುತ್ತಿದೆ. ಸೋಮವಾರ ಸಂಜೆ ಪಂಚಕುಲದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಶಿಕ್ಷಕರ ಗುಂಪು ಚಂಡೀಗಡದ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ತಡೆಯುವ ಪ್ರಯತ್ನ ನಡೆಸಿದರು.

ಹೋರಾಟಗಾರರು ಇದಕ್ಕೆ ಮಣಿಯದ ಕಾರಣ ಲಾಠಿ ಚಾರ್ಜ್​ ಮತ್ತು ವಾಟರ್​ ಕ್ಯಾನನ್​ಗಳ ಪ್ರಯೋಗಕ್ಕೆ ಪೊಲೀಸರು ಮುಂದಾದರು. ರೊಚ್ಚಿಗೆದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಮಾರಾಮಾರಿಯಲ್ಲಿ ಮೂವರು ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಂಟು ಜನ ಪೊಲೀಸರಿಗೆ ಗಾಯಗಳುಂಟಾದವು. ಪ್ರತಿಭಟನಾಕಾರರಲ್ಲಿ 15 ಜನರಿಗೆ ಗಾಯಗಳುಂಟಾದವು ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)