ನವದೆಹಲಿ: ವಿಮಾನ ಹಾಗೂ ರೈಲ್ವೆ ತಯಾರಿಕಾ ಕಂಪನಿ ಕೆನಡಾದ ಬೊಂಬಾರ್ಡಿಯರ್, ಫ್ರಾನ್ಸ್ನ ರೈಲ್ವೆ ದಿಗ್ಗಜ ಅಲ್ಸ್ಟಾಮ್ ಹಾಗೂ ಜರ್ಮ ನಿಯ ದೈತ್ಯ ಸೀಮನ್ಸ್ ಕಂಪನಿಗಳು ಭಾರತದಲ್ಲಿ ರೈಲು ಓಡಿಸೋಕೆ ಸಜ್ಜಾಗಿವೆ.
ದೇಶೀಯ ಸಾರ್ವಜನಿಕ ವಲಯದ ಕಂಪನಿಗಳಾದ ಬಿಎಚ್ಇಎಲ್, ಎನ್ಐಐಎಫ್ ಕಂಪನಿಗಳು ಕೂಡ ನಾವೇನು ಕಮ್ಮಿಯಿಲ್ಲ ಎನ್ನುವಂತೆ ಈ ವಿದೇಶಿ ಕಂಪನಿಗಳೊಂದಿಗೆ ಪೈಪೋಟಿಗೆ ಇಳಿದಿವೆ.
ಖಾಸಗಿಯವರಿಗೂ ರೈಲು ಓಡಿಸಲು ಅವಕಾಶ ನೀಡಿ ಭಾರತೀಯ ರೈಲ್ವೆ ಇಲಾಖೆ ಕರೆದಿರುವ ಟೆಂಡರ್ನಲ್ಲಿ 23ಕ್ಕೂ ಕಂಪನಿಗಳು ಆಸಕ್ತಿ ತೋರಿಸಿವೆ. ರೈಲನ್ನು ಖರೀದಿಸುವ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯುವ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಇಷ್ಟೆಲ್ಲ ಸಂಸ್ಥೆಗಳು ಟೆಂಡರ್ನಲ್ಲಿ ಸ್ಪರ್ಧೆಗಿಳಿದಿವೆ ಎಂದು ವಿಶ್ಲೇಷಿಸಲಾಗಿದೆ.
ನಿರ್ವಹಣೆಯಲ್ಲಿ ಅತ್ಯಂತ ಸೂಕ್ತ ಎನಿಸುವ ಕಂಪನಿಗಳಿಗಷ್ಟೇ ಅವಕಾಶ ನೀಡಲಾಗುತ್ತದೆ ಜತೆಗೆ, ಪ್ರಯಾಣದ ಟಿಕೆಟ್ ದರವನ್ನು ನಿಗದಿಪಡಿಸುವ ಸ್ವಾತಂತ್ರ್ಯವನ್ನು ಈ ಕಂಪನಿಗಳಿಗೆ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಇಎಂಎಲ್, ಐಆರ್ಸಿಟಿಸಿ, ಸಿಎಎಫ್, ಸ್ಟರ್ಲೈಟ್, ಭಾರತ್ ಫೋರ್ಜ್, ಜೆಕೆಬಿ ಇನ್ಫ್ರಾ, ತಿತಾಘರ್ ವ್ಯಾಗನ್ಸ್ ಲಿಮಿಟೆಡ್ ಮೊದಲಾದ ಕಂಪನಿಗಳು ಪ್ರಮುಖವಾಗಿವೆ.
ಖಾಸಗಿಯವರಿಗೆ ಅವಕಾಶ ನೀಡುವ ಮೂಲಕ ಈ ಕ್ಷೇತ್ರದಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಬೆಂಗಳೂರು, ಚಂಡಿಗಢ್, ಜೈಪುರ, ದೆಹಲಿ, ಮುಂಬೈ, ಪಟನಾ, ಪ್ರಯಾಗ್ರಾಜ್, ಸಿಕಂದರಾಬಾದ್, ಹೌರಾ, ಚೆನ್ನೈ ವಲಯಗಳಲ್ಲಿ ಖಾಸಗಿ ರೈಲುಗಳು ಸಂಚರಿಸಲಿವೆ.