ನ್ಯೂಸ್

ಮಾನಸಿಕ ಒತ್ತಡ; ಹೈದರಾಬಾದ್​ ಐಐಟಿ ಹಾಸ್ಟೆಲ್​ನಲ್ಲಿ ಪ್ರಾಣಬಿಟ್ಟ ವಿದ್ಯಾರ್ಥಿನಿ

ಹೈದರಾಬಾದ್​: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಐಐಟ​ ಹೈದರಾಬಾದ್​ನಲ್ಲಿ ಸ್ನಾತಕೋತರ ವಿದ್ಯಾರ್ಥಿನಿ ತಮ್ಮ ಹಾಸ್ಟೆಲ್​ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳ ಅಂತರದಲ್ಲಿ ಇದು ಎರಡನೇ ಸಾವು ಎಂದು ತಿಳಿದು ಬಂದಿದೆ.

ಓಡಿಶಾ ಮೂಲದ ಎಂಟೆಕ್​ ವಿದ್ಯಾರ್ಥಿನಿ ಮಮಿತಾ ನಾಯ್ಕ್​(21) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಕಳೆದ ತಿಂಗಳು ಜುಲೈ 26ರಂದು ಮಮಿತಾ ಐಐಟಿ ಸೇರಿದ್ದರು. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಬಾರದೇ ಇರುವುದನ್ನೂ ಗಮನಿಸಿದ ಆಕೆಯ ಸ್ನೇಹಿತರು ಹಾಸ್ಟೆಲ್​ಗೆ ತೆರಳಿ ಪರಿಶೀಲಿಸಿದಾಗ ಘಟನೆ ಬಳಕಿಗೆ ಬಂದಿದೆ.

ಮಾನಸಿಕ ಒತ್ತಡ

ಮಮಿತಾ ನಾಯ್ಕ್​ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್​ನೋಟ್​ ಬರೆದಿದ್ದು, ಮಾನಸಿಕ ಒತ್ತಡದಿಂದಾಗಿ ತಾನು ಈ ನಿರ್ಧಾರ ಮಾಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಇದರಲ್ಲಿ ಯಾರ ಒತ್ತಾಯವೂ ಇಲ್ಲ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ಸಂಗಾರೆಡ್ಡಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಮೃತದೇಹವನ್ನೂ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ತಿಂಗಳ ಅವಧಿಯಲ್ಲಿ ಎರಡನೇ ಪ್ರಕರಣ

ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಐಐಟಿ ಹೈದರಾಬಾದ್​ ಕ್ಯಾಂಪಸ್​ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 17ರಂದು ನೆಲ್ಗೊಂಡ ನಿವಾಸಿ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ವಿದ್ಯಾರ್ಥಿ ಡಿ. ಕಾರ್ತಿಕ್​ ಎಂಬಾತ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ.

ಓದಿನ ಒತ್ತಡ , ಮಾನಸಿಕ ಹಿಂಸೆ, ಪರೀಕ್ಷೆಗಳಲ್ಲಿ ಹೆಚ್ಚ ಬ್ಯಾಕ್​ಲಾಗ್​ಗಳಾದ ಕಾರಣ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.