Hyderabad Theatre Fine: ಸಿನಿಮಾ ಆರಂಭಕ್ಕೂ ಮುನ್ನ ಜಾಹೀರಾತು, ಟ್ರೇಲರ್‌ಗಳನ್ನು ಹಾಕಿ ಸುಮಾರು 22 ನಿಮಿಷ ತಡ ಮಾಡಿದ ಹೈದರಾಬಾದ್‌ನ ಥಿಯೇಟರ್‌ಗೆ ಗ್ರಾಹಕ ಆಯೋಗ 75 ಸಾವಿರ ರೂ. ದಂಡ ವಿಧಿಸಿದೆ.
ಈ ಘಟನೆ 2025ರ ಜೂನ್ 20ರಂದು ನಡೆದಿದ್ದು, 33 ವರ್ಷದ ವ್ಯಕ್ತಿಯೊಬ್ಬರು ಧನುಷ್ ಹಾಗೂ ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ ನೋಡಲು ಎರಡು ಟಿಕೆಟ್ ಬುಕ್ ಮಾಡಿದ್ದರು. ರಾತ್ರಿ 10.35ಕ್ಕೆ ಶೋ ಇದ್ದರೂ, 10.52ರವರೆಗೂ ಜಾಹೀರಾತು ಮತ್ತು ಟ್ರೇಲರ್‌ಗಳು ಪ್ರಸಾರವಾಗಿವೆ ಎಂದು ಅವರು ದೂರಿದ್ದರು.
ಸಿನಿಮಾ ಶುರುವಾಗೋದು ತಡವಾದ ಪರಿಣಾಮ ಅವರ ಮುಂದಿನ ಪ್ಲಾನ್‌ಗಳಿಗೂ ತೊಂದರೆಯಾಗಿದೆ. ಹೀಗಾಗಿ ರಾತ್ರಿ ಸುಮಾರು 3 ಗಂಟೆಗೆ ಮನೆ ತಲುಪಬೇಕಾಯಿತು ಎಂದು ಅವರು ದೂರಿದ್ದಾರೆ. ನಿಗದಿತ ಸಮಯಕ್ಕೆ ಸಿನಿಮಾ ಆರಂಭಿಸದಿರುವುದು ಸೇವೆಯಲ್ಲಿನ ಕೊರತೆ ಎಂದು ಆರೋಪಿಸಿ ಗ್ರಾಹಕ ಆಯೋಗದ ಮೊರೆ ಹೋಗಿದ್ದರು
ಪ್ರಕರಣದ ವಿಚಾರಣೆ ನಡೆಸಿದ ಹೈದರಾಬಾದ್ ಜಿಲ್ಲಾ ಗ್ರಾಹಕ ಆಯೋಗ, ವಾಣಿಜ್ಯ ಜಾಹೀರಾತು ಹಾಗೂ ಪ್ರಚಾರದ ವಿಡಿಯೋಗಳಿಂದ ಸಿನಿಮಾ ಶುರುವಾಗೋದು ತಡ ಮಾಡಿದ್ದು ಸರಿಯಲ್ಲ ಎಂದು ಹೇಳಿದೆ. ಅಲ್ಲದೆ, ಸಾರ್ವಜನಿಕ ಸೇವಾ ಜಾಗೃತಿ ಚಿತ್ರಗಳ ಪ್ರದರ್ಶನಕ್ಕೆ ಎರಡು ನಿಮಿಷಗಳ ಮಿತಿ ಇರುವ ಸರ್ಕಾರಿ ಮಾರ್ಗಸೂಚಿಯನ್ನೂ ಆಯೋಗ ಉಲ್ಲೇಖಿಸಿದೆ.
ಸೆಪ್ಟೆಂಬರ್ 11, 2026ರ ಆದೇಶದಂತೆ, 20,000 ರೂ. ಅನ್ನು ದೂರುದಾರರಿಗೆ ಪರಿಹಾರವಾಗಿ, 5,000 ರೂ. ಅನ್ನು ಕಾನೂನು ವೆಚ್ಚವಾಗಿ ನೀಡಬೇಕು. ಉಳಿದ 50,000 ರೂ. ಅನ್ನು ಜಿಲ್ಲಾ ಗ್ರಾಹಕ ಕಲ್ಯಾಣ ನಿಧಿಗೆ ದಂಡಾತ್ಮಕ ಮೊತ್ತವಾಗಿ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಇದನ್ನೂ ಓದಿ: ಅಮೆರಿಕಕ್ಕೆ ಚೀನಾದ ‘ಪಾಂಡಾ ಗಿಫ್ಟ್’; ಸ್ನೇಹಕ್ಕೆ ಸೇತುವೆಯಾದ ಮುದ್ದು ಜೋಡಿ! | China Pandas
ನಿಗದಿತ ಸಮಯಕ್ಕೆ ಸಿನಿಮಾ ಆರಂಭಿಸದೆ ಜಾಹೀರಾತು ಮತ್ತು ಟ್ರೇಲರ್‌ಗಳಿಂದ ಪ್ರೇಕ್ಷಕರಿಗೆ ಉಂಟಾಗುವ ವಿಳಂಬದ ವಿಚಾರವನ್ನು ಈ ಆದೇಶ ಮುನ್ನೆಲೆಗೆ ತಂದಿದೆ. (ಏಜೆನ್ಸೀಸ್)