ನ್ಯೂಸ್

21 ವರ್ಷದ ಯುವತಿಯ ಬಂಧನ: ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು

ಕೋಲ್ಕತ: ಪಶ್ಚಿಮ ಬಂಗಾಳದ ನಾರ್ತ್​ 24 ಪರಗಣಾಸ್ ಜಿಲ್ಲೆಯ 21 ವರ್ಷದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಆಕೆಗೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಏ ತೊಯ್ಬಾ(LeT)ದ ನಂಟು ಇರುವುದು ಧೃಡಪಟ್ಟ ಕಾರಣ ಬಂಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಗರದ ಪ್ರಸಿದ್ಧ ಕಾಲೇಜೊಂದರಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಆಕೆ. ಅನ್​ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಶನ್)ಆ್ಯಕ್ಟ್​ ಮತ್ತು ಐಪಿಸಿಯ ವಿವಿಧ ಸೆಕ್ಷನ್​ಗಳ ಪ್ರಕಾರ ಪ್ರಕರಣಗಳನ್ನು ದಾಖಲಿಸಿಕೊಂಡು ಆಕೆಯನ್ನು ಬಂಧಿಸಲಾಗಿದೆ. ಆಕೆ ಎಲ್​ಇಟಿಗಾಗಿ ಮಹಿಳೆಯರನ್ನು ನೇಮಕ ಮಾಡುತ್ತಿದ್ದಳು. ವಾಟ್ಸ್ಆ್ಯಪ್ ಗ್ರೂಪ್​ಗಳಲ್ಲಿ ದೇಶವಿರೋಧಿ ಸಂದೇಶಗಳನ್ನು ಪಸರಿಸುತ್ತಿದ್ದಳು. ಪಾಕಿಸ್ತಾನದ ಸಿಮ್ ಕಾರ್ಡ್​ ಬಳಸಿಕೊಂಡು ಈ ಗ್ರೂಪ್​ಗಳನ್ನು ರಚಿಸಿಕೊಂಡಿದ್ದಳು. 2019ರಲ್ಲೇ ಈಕೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಎಚ್ಚರಿಕೆಯ ನಿಗಾ ಇರಿಸುವಂತೆ ಸೂಚನೆ ಬಂದಿತ್ತು. ಆಕೆಯ ಚಟುವಟಿಕೆಗಳೆಲ್ಲವೂ ಅನುಮಾನಾಸ್ಪದವಾಗಿ ಕಂಡ ಕಾರಣ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

ನಾರ್ತ್ 24 ಪರಗಣಾಸ್​ನ ಬದುರಿಯಾ ಪ್ರದೇಶದ ನಿವಾಸಿಯಾಗಿದ್ದು ಆಕೆಯನ್ನು ಬುಧವಾರ ರಾತ್ರಿ ಅಲ್ಲಿಂದಲ್ಲೇ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆಕೆ ದಶಕದ ಹಿಂದೆ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿದ್ದು, ಸ್ಥಳೀಯರೊಂದಿಗೆ ಪೂರ್ತಿಯಾಗಿ ಬೆರೆತಿದ್ದಳು. ಅರೇಬಿಕ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಳು. ವಾಟ್ಸ್​ಆ್ಯಪ್ ಕರೆಯ ಮೂಲಕ ಪಾಕಿಸ್ತಾನದ ಎಲ್​ಇಟಿ ನಾಯಕರೊಂದಿಗೆ ಸಂಪರ್ಕ ಹೊಂದಿರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ. ಅನೇಕ ಸರ್ಕಾರಿ ಉದ್ಯೋಗಸ್ಥರನ್ನು ಬಲೆಗೆ ಕೆಡವುದಕ್ಕಾಗಿ ಹನಿಟ್ರ್ಯಾಪ್​ಗೆ ಪಾಕಿಸ್ತಾನದ ಐಎಸ್​ಐ ಈಕೆಯನ್ನೇ ಬಳಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾಗಿ ವರದಿಯಾಗಿದೆ.

ಆಕೆಗೆ ಮದುವೆಯಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಾತರಿಯಾಗಿಲ್ಲ. ಇನ್ನಷ್ಟು ಮಾಹಿತಿ ಕಲೆಹಾಕುವುದಕ್ಕೆ ನಾವು ಶ್ರಮಿಸುತ್ತಿದ್ದೇವೆ. ಇದುವರೆಗಿನ ಮಾಹಿತಿ ಪ್ರಕಾರ ಕೆಲವು ಮಹಿಳೆಯರನ್ನು ಈಕೆ ಉಗ್ರ ಸಂಘಟನೆಗೆ ನೇಮಿಸಿಕೊಟ್ಟಿದ್ದಾಳೆ. ಅವರನ್ನು ಗುರುತಿಸುವ ಕೆಲಸ ಈಗ ನಡೆದಿದೆ. ನ್ಯಾಯಾಲಯ ಈಕೆಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಕೊಟ್ಟಿದೆ ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್)