ಸೂರತ್: ಇನ್ಸ್ಟಾಗ್ರಾಂ ಮೂಲಕ ಪರಿಚಿತನಾದವನು ಅತ್ಯಾಚಾರ ಎಸಗಿದ, ಆದರೆ ಮದುವೆ ಆಗಲಿಲ್ಲ ಎಂದು 21ರ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಇಕ್ರಮ್ ಫ್ಯಾನ್ಸಿ(24) ಎಂದು ಗುರುತಿಸಲಾಗಿದೆ.
ಜಹಾಂಗೀರಪುರ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಪ್ರಕಾರ, ಆರೋಪಿ ಇಕ್ರಮ್ ಇನ್ಸ್ಟಾಗ್ರಾಂ ಮೂಲಕ ಪರಿಚಿತ. ಯುವತಿಯ ಸಮೀಪದ ವರಿವ್ ಗ್ರಾಮದವನು. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸ್ನೇಹ ಪ್ರೇಮದ ಹಂತದಲ್ಲಿದ್ದಾಗ ಯುವತಿ ಆರೋಪಿಯನ್ನು ಇನ್ಸ್ಟಾಗ್ರಾಂನಲ್ಲಿ ಬಿಫ್ರೆಂಡ್ ಮಾಡಿದ್ದಳು. ಆಗ ಇಕ್ರಮ್ ಯುವತಿ ಬಳಿ ಬಂದು ಕಾಡಿ ಬೇಡಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆತನ ಭರವಸೆ ನಂಬಿದ ಯುವತಿ ಮನೆಯವರ ಬಳಿ ಬಂದು ಆತನನ್ನೇ ವಿವಾಹವಾಗುವುದಾಗಿ ಹೇಳಿದ್ದಳು. ಮನೆಯವರು ವಿರೋಧಿಸಿದಾಗ ವಿಷ ಕುಡಿದು ಸಾಯಲೆತ್ನಿಸಿ ಬಳಿಕ ಎರಡೂ ಕುಟುಂಬದವರು ಮಾತನಾಡಿಕೊಂಡು ಇಬ್ಬರ ನಿಶ್ಚಿತಾರ್ಥ ಮಾಡಿದ್ದರು.
ಆದರೆ, ಆ ನಂತರದಲ್ಲಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ಇಕ್ರಮ್. ಆಕೆಯೂ ಇಕ್ರಮ್ನನ್ನು ಒಪ್ಪಿಕೊಂಡಿದ್ದಳು. ಆದರೆ, ಮದುವೆ ದಿನಾಂಕ ನಿಗದಿ ಮಾಡುವ ವಿಚಾರದಲ್ಲಿ ಇಕ್ರಮ್ ಹಿಂದೇಟು ಹಾಕತೊಡಗಿದಾಗ ಯುವತಿಗೆ ಮತ್ತೆ ಭ್ರಮನಿರಸನವಾಗತೊಡಗಿತು. ಮದುವೆ ಆಗಿ ಬಿಡು ಎಂದು ಯುವತಿ ಒತ್ತಾಯಿಸಲಾರಂಭಿಸಿದಾಗ ಇಕ್ರಮ್ ತಲೆಮರೆಸಿಕೊಂಡು ಓಡಾಡತೊಡಗಿದ್ದ. ಮದುವೆಯ ಭರವಸೆಯನ್ನು ಮರೆತಿದ್ದ.
ಇತ್ತೀಚೆಗೆ ಇಕ್ರಮ್ನ ಮನೆಯವರು ಯುವತಿಯ ಮನೆಗೆ ಬಂದು ನಿಮ್ಮ ಮಗಳನ್ನು ನಮ್ಮ ಮಗನಿಗೆ ವಿವಾಹ ಮಾಡಿಸಲು ನಮಗೆ ಇಷ್ಟವಿಲ್ಲ ಎಂದು ಹೋಗಿದ್ದರು. ಈ ನಡುವೆ, ಯುವತಿಗೆ ಮತ್ತೆ ಕರೆ ಮಾಡಿದ ಇಕ್ರಮ್ ಹೋಟೆಲ್ಗೆ ಬರುವಂತೆ ಒತ್ತಾಯಿಸಿದ್ದ. ಈ ಬೆಳವಣಿಗೆಗಳಿಂದ ಬೇಸತ್ತ ಯುವತಿ ಮತ್ತೆ ಆತ್ಮಹತ್ಯೆ ಪ್ರಯತ್ನಿಸಿದ್ದಳು. ಆದರೆ ಸಫಲವಾಗಿರಲಿಲ್ಲ. ಬಳಿಕ ಇಕ್ರಮ್ ವಿರುದ್ಧ ದೂರು ದಾಖಲಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)