ತಿರುವನಂತಪುರಂ: ಆಂಧ್ರ ಪ್ರದೇಶದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ಅಂದಾಜು 1 ಕೋಟಿ ರೂ. ಮೌಲ್ಯದ ಗಾಂಜಾವನ್ನು ಕೇರಳ ರಾಜ್ಯ ಅಬಕಾರಿ ಇಲಾಖೆ ಅಧಿಕಾರಿಗಳು ತಿರುವನಂತಪುರದಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಓರ್ವ ಕೊಲೆ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಕಂದು ಬಣ್ಣದ ಪ್ಯಾಕೆಟ್ನಲ್ಲಿದ್ದ ಭಾರಿ ಪ್ರಮಾಣದ ಗಾಂಜಾವನ್ನು ಆರೋಪಿಗಳು ಎರಡು ಕಾರಿನಲ್ಲಿ ತುಂಬಿಕೊಂಡು ಆಂಧ್ರ ಪ್ರದೇಶದಿಂದ ಬೆಂಗಳೂರು ಮಾರ್ಗವಾಗಿ ಕೇರಳಕ್ಕೆ ಸಾಗಿಸಿದ್ದರು. ಮಾರ್ಗ ಮಧ್ಯೆ ತಿರುವನಂತಪುರದ ಬಲರಾಮಪುರಂನಲ್ಲಿ ಕಾರುಗಳನ್ನು ತಡೆದು ಅಬಕಾರಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತನಾಡಿರುವ ಅಬಕಾರಿ ಅಧಿಕಾರಿಗಳು, ಆರೋಪಿಗಳು ವಾಹನವನ್ನು ಡಿಕ್ಕಿ ಹೊಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಅಲ್ಲದೆ, ನಮ್ಮೊಂದಿಗೆ ಕಾದಟಕ್ಕೂ ಇಳಿದರು. ಬಲವಂತವಾಗಿ ಅವರನ್ನು ನಮ್ಮ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ಜೋಮಿತ್ (38), ಸುರೇಶ್ ಕುಮಾರ್ (32) ಮತ್ತು ವಿತಿನ್ ರಾಜ್ (30) ಎಂದು ಗುರುತಿಸಲಾಗಿದೆ. ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿ ಸುರೇಶ್ ಕುಮಾರ್ ತಿರುವನಂತಪುರಂ ಮತ್ತು ಕೊಲ್ಲಂನಲ್ಲಿ ದಾಖಲಾಗಿರುವ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಕೊಲೆ ಪ್ರಕರಣ ವಿಚಾರಣೆಯೂ ಇನ್ನು ಮುಂದುವರಿದಿದ್ದು, ಆರೋಪಿ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಡ್ರಗ್ಸ್ ಸಾಗಾಟಕ್ಕೆ ಬಳಸಿಕೊಂಡಿದ್ದ ಎರಡು ಇನ್ನೋವಾ ಕಾರಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಪಲಕ್ಕಾಡ್ನಲ್ಲಿಯೂ ಅಬಕಾರಿ ಅಧಿಕಾರಿಗಳು ಲಾರಿ ಮತ್ತು ಕಾರಿನಲ್ಲಿ ಸಾಗಿಸುತ್ತಿದ್ದ 50 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)