Mumbai train blasts : ಮುಂಬೈ ರೈಲು ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎಲ್ಲ 12 ಜನರನ್ನು ಬಾಂಬೆ ಹೈಕೋರ್ಟ್ ಸೋಮವಾರ (ಜುಲೈ 21) ಖುಲಾಸೆಗೊಳಿಸಿದೆ. 2006 ರಲ್ಲಿ ನಡೆದ ಸ್ಫೋಟದಲ್ಲಿ 189 ಜನರು ಮೃತಪಟ್ಟು, 800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರೈಲಿನಲ್ಲಿ ಸಂಭವಿಸಿದ ಸರಣಿ ಸ್ಫೋಟಗಳು ಮುಂಬೈ ಉಪನಗರ ರೈಲ್ವೆ ಜಾಲವನ್ನೇ ಬೆಚ್ಚಿಬೀಳಿಸಿತು. ಈ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆರೋಪಿಗಳನ್ನು ಎರಡು ದಶಕಗಳ ನಂತರ ಖುಲಾಸೆಗೊಳಿಸಲಾಗಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ಆದೇಶವನ್ನು ಓದಿದ ನ್ಯಾಯಮೂರ್ತಿಗಳು ಪ್ರಕರಣದಲ್ಲಿನ ಗಂಭೀರ ನ್ಯೂನತೆಗಳನ್ನು ಎತ್ತಿ ತೋರಿಸಿದರು. ಪ್ರಮುಖ ಸಾಕ್ಷಿಗಳು ವಿಶ್ವಾಸಾರ್ಹವಲ್ಲ, ಗುರುತಿನ ಪೆರೇಡ್‌ಗಳು ಕೂಡ ಪ್ರಶ್ನಾರ್ಹವಾಗಿವೆ ಮತ್ತು ಚಿತ್ರಹಿಂಸೆಯ ಮೂಲಕ ತಪ್ಪೊಪ್ಪಿಗೆಯ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.
ವಿಚಾರಣೆಯ ಸಂದರ್ಭದಲ್ಲಿ ಗುರುತಿನ ಪರೇಡ್ ಬಗ್ಗೆ ಪ್ರತಿವಾದಿಗಳು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಏಕೆಂದರೆ, ಈ ಪ್ರಕರಣದ ಅನೇಕ ಸಾಕ್ಷಿಗಳು ದೀರ್ಘಕಾಲದವರೆಗೆ ಮೌನವಾಗಿದ್ದರು. ಅಲ್ಲದೆ, ಕೆಲವರು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಮೌನವಾಗಿದ್ದು, ಇದ್ದಕ್ಕಿದ್ದಂತೆ ಆರೋಪಿಯನ್ನು ಗುರುತಿಸಿದರು. ಇದು ನಿಜಕ್ಕೂ ಅಸಹಜವಾಗಿದೆ ಎಂದು ಪ್ರತಿವಾದಿಗಳು ಪ್ರಶ್ನೆಗಳನ್ನು ಎತ್ತಿದ್ದರು. ಇದೇ ಅಂಶವನ್ನು ನ್ಯಾಯಾಲಯ ಕೂಡ ಗಮನಿಸಿತು.
ಇನ್ನು ಘಾಟ್ಕೋಪರ್ ಸ್ಫೋಟ ಪ್ರಕರಣ ಸೇರಿದಂತೆ ಅಪರಾಧ ವಿಭಾಗದ ಹಲವಾರು ಸಂಬಂಧವಿಲ್ಲದ ಪ್ರಕರಣಗಳಲ್ಲಿ ಒಬ್ಬ ಸಾಕ್ಷಿಯು ಸಾಕ್ಷಿ ಹೇಳಿದ್ದರಿಂದ, ಆತನ ಸಾಕ್ಷ್ಯವು ವಿಶ್ವಾಸಾರ್ಹವಲ್ಲ ಎಂದು ನ್ಯಾಯಾಲಯವು ಪರಿಗಣಿಸಿತು. ಇತರರು ಅನೇಕ ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ಆರೋಪಿಗಳನ್ನು ನೆನಪಿಸಿಕೊಳ್ಳುವುದು ಮತ್ತು ಗುರುತಿಸುವುದು ಹೇಗೆ ಎಂದು ವಿವರಿಸಲು ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿತು.
ವಿಚಾರಣೆಯ ಸಮಯದಲ್ಲಿ ಕೆಲವು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿಲ್ಲ. ವಶಪಡಿಸಿಕೊಂಡ ಆರ್‌ಡಿಎಕ್ಸ್ ಮತ್ತು ಇತರ ಸ್ಫೋಟಕ ವಸ್ತುಗಳ ಸಾಕ್ಷ್ಯವು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯವನ್ನು ತಲುಪುವವರೆಗೆ ಅವು ಸರಿಯಾಗಿತ್ತು ಎಂದು ಪ್ರಾಸಿಕ್ಯೂಷನ್ ಸಾಬೀತು ಮಾಡಲು ಸಾಧ್ಯವಾಗಲಿಲ್ಲ ಎಂದು ನ್ಯಾಯಮೂರ್ತಿಗಳು ಕಾರ್ಯವಿಧಾನದ ಲೋಪಗಳನ್ನು ಎತ್ತಿ ತೋರಿಸಿದರು.
ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಅನುಮಾನ ಮೀರಿ ಸಾಬೀತುಪಡಿಸುವಲ್ಲಿ "ಸಂಪೂರ್ಣವಾಗಿ ವಿಫಲವಾಗಿದೆ" ಎಂದು ನ್ಯಾಯಾಲಯ ತೀರ್ಮಾನಿಸಿ, ವಿಶೇಷ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯವು 2015ರ ಅಕ್ಟೋಬರ್ನಲ್ಲಿ ಐದು ಜನರಿಗೆ ಮರಣದಂಡನೆ ಮತ್ತು ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ತೀರ್ಪನ್ನು ರದ್ದುಗೊಳಿಸಿತು.
ಮೂಲತಃ ಶಿಕ್ಷೆಗೊಳಗಾದ 12 ಜನರಲ್ಲಿ, ಕಮಲ್ ಅನ್ಸಾರಿ ಹೆಸರಿ ಓರ್ವ ಆರೋಪಿ 2021ರಲ್ಲಿ ಕೋವಿಡ್ನಿಂದಾಗಿ ನಾಗ್ಪುರ ಜೈಲಿನಲ್ಲಿದ್ದಾಗ ಮೃತಪಟ್ಟನು. 19 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವ ಉಳಿದ 11 ಜನರು ಇದೀಗ ಬಿಡುಗಡೆಯಾಗಲಿದ್ದಾರೆ. ಈ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಪ್ರತಿನಿಧಿಸುವ ವಕೀಲ ಯುಗ್ ಮೋಹಿತ್ ಚೌಧರಿ, ಈ ತೀರ್ಪು ತಪ್ಪಾಗಿ ಜೈಲಿನಲ್ಲಿರಿಸಲ್ಪಟ್ಟವರಿಗೆ ಭರವಸೆಯ ಸಂಕೇತವಾಗಲಿದೆ ಎಂದು ಹೇಳಿದರು.
2006ರ ಮುಂಬೈ ರೈಲು ಸ್ಫೋಟಗಳು ಭಾರತದ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿ ಉಳಿದಿವೆ. ಪಶ್ಚಿಮ ರೈಲ್ವೆ ಮಾರ್ಗದಲ್ಲಿ ಪ್ರಥಮ ದರ್ಜೆಯ ಕಂಪಾರ್ಟ್‌ಮೆಂಟ್‌ಗಳಲ್ಲಿ ಏಳು ಬಾಂಬ್‌ಗಳು ಸರಣಿ ಸ್ಫೋಟಗೊಂಡವು. (ಏಜೆನ್ಸೀಸ್)