Bail Cancel: 2001ರಲ್ಲಿ ಮುಂಬೈನಲ್ಲಿ ನಡೆದ ಹೋಟೆಲ್ ಉದ್ಯಮಿ ಜಯಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ಖ್ಯಾತ ಗ್ಯಾಂಗ್ ಸ್ಟಾರ್ ಛೋಟಾ ರಾಜನ್ ಗೆ ನೀಡಲಾಗಿದ್ದ ಜಾಮೀನನ್ನು ಬುಧವಾರ (ಸೆ. 17) ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಆದೇಶ ನೀಡಿದೆ.
ಕಳೆದ ವರ್ಷ ಅಕ್ಟೋಬರ್ 23ರಂದು ಬಾಂಬೆ ಹೈಕೋರ್ಟ್ ಛೋಟಾ ರಾಜನ್ಗೆ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮಮನವಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿತು.
ಅಪರಾಧಿ ರಾಜನ್ 27 ವರ್ಷಗಳಿಂದ ತಲೆಮರೆಸಿಕೊಂಡಿದ್ದನು ಮತ್ತು ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದನು ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, "ಅಂತಹ ವ್ಯಕ್ತಿಗೆ ಶಿಕ್ಷೆಯನ್ನು ಏಕೆ ಅಮಾನತುಗೊಳಿಸಬೇಕು" ಎಂದು ಪ್ರಶ್ನಿಸಿತು. ಈ ವೇಳೆ ರಾಜನ್ ಪರ ವಕೀಲರು ಇದು ಯಾವುದೇ ಪುರಾವೆಗಳಿಲ್ಲದ ಪ್ರಕರಣ. 71 ಪ್ರಕರಣಗಳಲ್ಲಿ, ಸಿಬಿಐಗೆ ರಾಜನ್ ವಿರುದ್ಧ 47 ಪ್ರಕರಣಗಳಲ್ಲಿ ಯಾವುದೇ ಸಾಕ್ಷ್ಯಗಳು ಸಿಗಲಿಲ್ಲ ಮತ್ತು ತನಿಖಾ ಸಂಸ್ಥೆ ಅವುಗಳನ್ನು ಮುಕ್ತಾಯಗೊಳಿಸಿದೆ. ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವಾದಿಸಿದರು.
ಸಿಬಿಐ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಈ ಪ್ರಕರಣದಲ್ಲಿ ರಾಜನ್ ಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ ಎಂದು ಗಮನಕ್ಕೆ ತಂದರು. ಈ ವೇಳೆ ನ್ಯಾಯಪೀಠ ನಾವು ಈ ಪ್ರಕರಣದಲ್ಲಿ ಅಪರಾಧಿಯ ಜಾಮೀನು ಅನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿತು.
ಮತ್ತೆ ರಾಜನ್ ಪರ ವಕೀಲ ಈ ಪ್ರಕರಣಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದಾಗ, ನಿಮ್ಮ ಹೆಸರೇ ಸಾಕಷ್ಟು ದೊಡ್ಡದಾಗಿದೆ. ಸಾಕ್ಷಿಗಳು ಮುಂದೆ ಬರದ ಕಾರಣ ಹಲವು ಕೇಸ್ಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಪೀಠ ಖಾರವಾಗಿದೆ ಹೇಳಿದೆ.
ಮೇ 2024 ರಲ್ಲಿ, ವಿಚಾರಣಾ ವಿಶೇಷ ನ್ಯಾಯಾಲಯವು ಹೋಟೆಲ್ ಉದ್ಯಮಿಯ ಕೊಲೆ ಪ್ರಕರಣದಲ್ಲಿ ರಾಜನ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಶಿಕ್ಷೆಯ ವಿರುದ್ಧ ರಾಜನ್ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಶಿಕ್ಷೆಯನ್ನು ಅಮಾನತುಗೊಳಿಸಬೇಕು ಮತ್ತು ಮಧ್ಯಂತರದಲ್ಲಿ ಜಾಮೀನು ನೀಡಬೇಕು ಎಂದು ಅವರು ಕೋರಿದ್ದರು. ಹೈಕೋರ್ಟ್ ಜಾಮೀನು ನೀಡಿತ್ತು.
ಮುಂಬೈನ ಗಾಮ್ದೇವಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕರಾಗಿದ್ದ ಜಯಾ ಶೆಟ್ಟಿಯನ್ನು 2001 ಮೇ 4ರಂದು ಹೋಟೆಲ್‌ನ ಮೊದಲ ಮಹಡಿಯಲ್ಲಿ ರಾಜನ್ ಗ್ಯಾಂಗ್‌ನ ಇಬ್ಬರು ಸದಸ್ಯರು ಗುಂಡಿಕ್ಕಿ ಕೊಂದಿದ್ದರು. ಮೊದಲಿಗೆ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಹೇಮಂತ್ ಪೂಜಾರಿಯಿಂದ ಶೆಟ್ಟಿಗೆ ಸುಲಿಗೆ ಕರೆ ಬಂದಿದ್ದು, ಹಣ ಕೊಡಲು ನಿರಾಕರಿಸಿದ ಕಾರಣ ಕೊಲ್ಲಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. (ಏಜೆನ್ಸೀಸ್)