ನ್ಯೂಸ್

20000 ಕಂಪನಿ ಬೇನಾಮಿ! ರಾಜ್ಯದಲ್ಲಿ ತೆರಿಗೆ ವಂಚನೆ, ಅಕ್ರಮ ವಹಿವಾಟು ಸಾಬೀತು

ಕೀರ್ತಿನಾರಾಯಣ ಸಿ. ಬೆಂಗಳೂರು
ಉದ್ಯೋಗ ಕೊಡಿಸುವ, ಷೇರು ಹೂಡಿಕೆ, ಅಧಿಕ ಲಾಭಾಂಶದ ಹೆಸರಲ್ಲಿ ವಂಚಿಸುವ ನಕಲಿ ಕಂಪನಿಗಳ ಹಾವಳಿ ಮಿತಿ ಮೀರಿರುವ ನಡುವೆಯೇ ಕಳೆದ ಐದು ವರ್ಷದಲ್ಲಿ ಕರ್ನಾಟಕದಾದ್ಯಂತ 19,242 ಕಂಪನಿಗಳೇ ನಾಪತ್ತೆಯಾಗಿರುವ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ. ಕಳೆದೆರಡು ಆರ್ಥಿಕ ವರ್ಷದಲ್ಲಿ ಆರ್ಥಿಕ ವ್ಯವಹಾರಗಳ ಮತ್ತು ವಾರ್ಷಿಕ ಆದಾಯದ ವಿವರಗಳನ್ನು ಸರ್ಕಾರಕ್ಕೆ ಸಲ್ಲಿ ಸದ ಕಂಪನಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಬಹುತೇಕವು ಕಾನೂನುಬಾಹಿರ ಚಟುವಟಿಕೆ ಹಾಗೂ ವಂಚನೆ ಉದ್ದೇಶದಿಂದ ಸ್ಥಾಪಿಸಿರುವ ನಕಲಿ ಸಂಸ್ಥೆಗಳೆಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ.

ತೆರಿಗೆ ವಂಚನೆ, ಅಕ್ರಮ ಹಣಕಾಸು ವಹಿವಾಟು, ಬ್ಲಾ್ಯಕ್ ಮನಿ ವೈಟ್ ಮಾಡಿಕೊಳ್ಳಲು, ಆದಾಯ ಕಾನೂನು ಬದ್ಧವಾಗಿದೆ ಎಂದು ತೆರಿಗೆ ಇಲಾಖೆಗೆ ತೋರಿಸಲು ಕಂಪನಿಗಳನ್ನು ಸ್ಥಾಪಿಸಿ, ನಂತರ ನಿಷ್ಕ್ರಿಯಗೊಳಿಸಲಾಗುತ್ತದೆ. ಈಗ ಗುರುತಿಸಿರುವ ಬಹುತೇಕ ಕಂಪನಿಗಳು ಕಾನೂನುಬಾಹಿರ ವ್ಯವಹಾರಗಳ ಉದ್ದೇಶದಿಂದಲೇ ಸ್ಥಾಪಿಸಿ, ಮುಚ್ಚಲ್ಪಟ್ಟಿವೆ. ಕೆಲ ಕಂಪನಿಗಳು ಆರ್ಥಿಕ ನಷ್ಟ ಸೇರಿ ಬೇರೆ ಬೇರೆ ಕಾರಣಗಳಿಗೆ ವ್ಯವಹಾರಗಳನ್ನು ನಿಲ್ಲಿಸಿವೆ.

ದೇಶದಲ್ಲೆಷ್ಟು?: 2019-2020ರಿಂದ 2023-24ರವರೆಗೆ ಕರ್ನಾಟಕದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆಯಲ್ಲಿ ತೊಡಗದ 19,242 ಕಂಪನಿಗಳನ್ನು ಕೇಂದ್ರ ಕಾಪೋರೇಟ್ ವ್ಯವಹಾರಗಳ ಸಚಿವಾಲಯ ಗುರುತಿಸಿದೆ.

ನಿಷ್ಕ್ರಿಯಗೊಂಡಿರುವ ಇಂತಹ ಕಂಪನಿಗಳ ಸಂಖ್ಯೆ ದೇಶಾದ್ಯಂತ 2,33,566 ಪಟ್ಟಿ ಮಾಡಲಾಗಿದೆ. ವ್ಯಾಪಾರ ವಹಿವಾಟಿನ ಹೆಸರಲ್ಲಿ ಕಂಪನಿಗಳನ್ನು ನೋಂದಾಯಿಸಲಾಗುತ್ತದೆ. ನಕಲಿ ಕಂಪನಿಗಳ ವಿವರ ಬರೀ ಕಾಗದದ ಮೇಲಿರಲಿದ್ದು, ನೈಜವಾಗಿ ಯಾವುದೇ ವಹಿವಾಟು ನಡೆಸುವುದಿಲ್ಲ.

ನಕಲಿ ಪತ್ತೆ ಹೇಗೆ?: ಈ ಬೋಗಸ್ ಕಂಪನಿಗಳು ಯಾವುದೇ ಕಾನೂನುಬದ್ಧ ವ್ಯವಹಾರ ಹೊಂದಿರುವುದಿಲ್ಲ. ನೋಂದಣಿ ಸಂದರ್ಭದಲ್ಲಿ ಕಂಪನಿ ಮಾಲೀಕರು ಯಾರು? ನಿರ್ದೇಶಕರಾರು? ಬಂಡವಾಳ ಹೂಡಿದವರಾರು? ಬಂಡವಾಳ ಹೂಡಿಕೆ ಎಷ್ಟು? ಕಚೇರಿ ಎಲ್ಲಿದೆ? ಯಾವ ರೀತಿಯ ವ್ಯವಹಾರ? ಸೇರಿ ಕೊಡುವ ಪ್ರತಿಯೊಂದು ಮಾಹಿತಿಯೂ ತಪ್ಪಾಗಿರುತ್ತದೆೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಹೇಗೆಲ್ಲ ವಂಚಿಸುತ್ತಾರೆ?

  • ತೆರಿಗೆ ವಂಚಿಸುವುದಕ್ಕಾಗಿ ಕಂಪನಿಗಳ ಸ್ಥಾಪನೆ
  • ಸರಕು ಪೂರೈಸದೆ ನಕಲಿ ಇನ್​ವಾಯ್್ಸಳ ಸೃಷ್ಟಿ
  • ನಕಲಿ ಇನ್​ವಾಯ್್ಸ ಟ್ಯಾಕ್ಸ್ ಕ್ರೆಡಿಟ್​ಗೆ ಬಳಕೆ
  • ಅಕ್ರಮ ಹಣ ವರ್ಗಾವಣೆಗಾಗಿ ಕಂಪನಿ ಸ್ಥಾಪನೆ
  • ಕಪ್ಪು ಹಣ ಬಿಳಿಯಾಗಿಸಲು ಹೂಡಿಕೆ ರೂಪ
  • ಉದ್ಯೋಗದ ಕನ್ಸಲ್ಟೆನ್ಸಿ ಹೆಸರಿನಲ್ಲಿ ಮೋಸ
  • ಷೇರು ಹೂಡಿಕೆಯ ಹೆಸರಲ್ಲೂ ಹಣ ವಂಚನೆ

ಪೊಲೀಸರ ಸಲಹೆ ಏನು?

  • ವ್ಯವಹರಿಸುವ ಮುನ್ನ ಕಂಪನಿ ಬಗ್ಗೆ ಪರಿಶೀಲಿಸಿ
  • ಕಂಪನಿ ನೋಂದಣಿ ಆಗಿದೆಯೇ ತಿಳಿದುಕೊಳ್ಳಿ
  • ಮಾಲೀಕರು ಯಾರು? ಕಚೇರಿ ಎಲ್ಲಿದೆ ಪತ್ತೆ ಮಾಡಿ
  • ಎಷ್ಟು ಉದ್ಯೋಗಿಗಳಿದ್ದಾರೆಂದು ತಿಳಿದುಕೊಳ್ಳಿ
  • ಸರ್ಕಾರಕ್ಕೆ ಐಟಿ ರಿಟರ್ನ್ಸ್ ಸಲ್ಲಿಸಿದೆಯೆ ನೋಡಿ
  • ಅನುಮಾನ ಬಂದರೆ ಪೊಲೀಸ್ ದೂರು ನೀಡಿ

ತಜ್ಞರು ಹೇಳುವುದು ಏನು?

  • ಬೋಗಸ್ ಕಂಪನಿಗಳ ತಡೆಗೆ ಸರ್ಕಾರ ಬಿಗಿ ಕ್ರಮ ಜಾರಿಗೊಳಿಸಬೇಕು
  • ಆರ್ಥಿಕ ವಹಿವಾಟು ದಾಖಲೆ ಸಲ್ಲಿಕೆ ಅವಧಿ 1 ವರ್ಷಕ್ಕಿಂತ ತಗ್ಗಬೇಕು
  • ಪ್ರತಿ 3- 6 ತಿಂಗಳಿಗೊಮ್ಮೆ ಆರ್ಥಿಕ ವಹಿವಾಟಿನ ಪರಿಶೀಲನೆ ಆಗಲಿ
  • ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ವಹಿವಾಟಿನ ಮೇಲೆ ನಿಗಾ ಇಡಬೇಕು

ಕಂಪನಿಗಳ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ಬಗ್ಗೆ 3 ತಿಂಗಳಿಗೊಮ್ಮೆ ಸರ್ಕಾರ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ಏನೆಲ್ಲ ಆರ್ಥಿಕ ವಹಿವಾಟು ನಡೆದಿದೆ ಎಂಬ ಬಗ್ಗೆ ನಿಗಾ ಇಡಬೇಕು.

| ರಮೇಶ್ ಚಂದ್ರ ಲಹೋಟಿ ಅಧ್ಯಕ್ಷರು, ಎಫ್​ಕೆಸಿಸಿಐ