ಕೇರಳ: 20 ವರ್ಷದ ಯುವಕನೊಬ್ಬ ರೀಲ್ಸ್(Reels)ಗಾಗಿ ಇಲ್ಲಿನ ಕೋಝಿಕ್ಕೋಡ್‌ನ ಬೀಚ್ ರಸ್ತೆಯಲ್ಲಿ ಎರಡು ಐಷಾರಾಮಿ ಕಾರುಗಳ ವಿಡಿಯೋ ಚಿತ್ರೀಕರಣ ಮಾಡುವಾಗ ಪ್ರಾಣ ಕಳೆದುಕೊಂಡಿರುವ ಮಂಗಳವಾರ ನಡೆದಿದೆ.
ವಡಕರ ಮೂಲದ ಟಿಕೆ ಆಲ್ವಿನ್(20) ಮೃತ ಎಂದು ಗುರುತಿಸಲಾಗಿದೆ. ಬೆಳಗ್ಗೆ 7.30ರ ಸುಮಾರಿಗೆ ಚಿತ್ರೀಕರಣದಲ್ಲಿ ತೊಡಗಿದ್ದ ಐಷಾರಾಮಿ ಕಾರು ಆಲ್ವಿನ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ ದಿನ ಬೆಳಗ್ಗೆ ಮೃತಪಟ್ಟದ್ದಾನೆ.
ಆತ ರಸ್ತೆಯ ಮಧ್ಯದಲ್ಲಿ ನಿಂತು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಎರಡು ಕಾರುಗಳಲ್ಲಿ ಒಂದು ಟಿಕೆ ಆಲ್ವಿನ್ಗೆ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆ ಆತ ಮೃತನಾಗಿದ್ದಾನೆ ಎಂದು ವರದಿಯಾಗಿದೆ.
ವೆಬ್ ಡಿಸೈನಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಲ್ವಿನ್, ಎರಡು ವಾರಗಳ ಹಿಂದೆ ಕೊಲ್ಲಿ ದೇಶದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಖಾಸಗಿ ಕಾರು ಮಾರಾಟಗಾರರಿಗೆ ಕಾರುಗಳ ವಿಡಿಯೋ ಶೂಟ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ವಿಡಿಯೋ ಶೂಟ್ ಮುಗಿದ ಮೇಲೆ ತಮ್ಮ ಇನ್ಸ್ಟಾಗ್ರಾಮ್ಗೆ ರೀಲ್ಸ್ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಘಟನೆಯಲ್ಲಿ ಭಾಗಿಯಾದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಮರ್ಸಿಡಿಸ್-ಬೆನ್ಜ್ ಕಾರು ಡೀಲರ್‌ಶಿಪ್‌ನಿಂದ ಚಿತ್ರೀಕರಣಕ್ಕಾಗಿ ತರಲಾಗಿತ್ತು. ಅಪಘಾತಕ್ಕೆ ನಿಖರವಾದ ಕಾರಣವನ್ನು ನಿರ್ಧರಿಸಲು ಮತ್ತು ಯಾವ ವಾಹನವು ನೇರ ಹೊಣೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸಿಸ್)