ನ್ಯೂಸ್

ಉದ್ದಿಮೆಗಳಿಗೆ ಆಕ್ಸಿಜನ್: 20 ಲಕ್ಷ ಕೋಟಿ ರೂ. ಪ್ಯಾಕೇಜ್​ನಲ್ಲಿ ಎಂಎಸ್​ಎಂಇಗೆ ಭರಪೂರ ಕೊಡುಗೆ

ನವದೆಹಲಿ: ಲಾಕ್​ಡೌನ್​ನಿಂದಾಗಿ ಎಲ್ಲ ವಲಯ, ವರ್ಗದ ಜನರು ಎದುರಿಸುತ್ತಿರುವ ಸಂಕಷ್ಟ ತಗ್ಗಿಸುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ -20 ಲಕ್ಷ ಕೋಟಿ ರೂ.ವಿಶೇಷ ಪ್ಯಾಕೇಜ್​ನ ಮೊದಲ ಚರಣದಲ್ಲಿ ಆರು ವಲಯಗಳಿಗೆ 15 ನೆರವಿನ ಉಪಕ್ರಮಗಳ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರಕಟಿಸಿದರು.

ಜನರ ಬಳಿ ಹೆಚ್ಚಿನ ನಗದು ಇರುವಂತೆ ಮಾಡುವುದು, ಉದ್ದಿಮೆ ಗಳು, ಇವುಗಳಿಗೆ ಸಾಲ ನೀಡುವ ಬ್ಯಾಂಕ್ ಅಥವಾ ಸಂಸ್ಥೆಗಳಲ್ಲಿ ಹಣದ ಹರಿವು ಹೆಚ್ಚಳಕ್ಕೆ ಒತ್ತು ನೀಡುವುದು ಸರ್ಕಾರದ ಉದ್ದೇಶ.

15 ನೆರವಿನ ಪೈಕಿ ಕಿರು, ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಿಗೆ (ಎಂಎಸ್​ಎಂಇ) ಆರು ನೆರವು ದೊರಕಿದ್ದು, ಕಾರ್ವಿುಕರ ಭವಿಷ್ಯ ನಿಧಿ (ಇಪಿಎಫ್) ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್​ಬಿಎಫ್​ಸಿ), ವಸತಿ ಹಣಕಾಸು ನಿಗಮ (ಎಚ್​ಎಫ್​ಸಿ), ಕಿರು ಸಾಲ ಸಂಸ್ಥೆಗೆ (ಎಂಎಫ್​ಐ) ತಲಾ ಎರಡು, ವಿದ್ಯುತ್ ವಿತರಣಾ ಕಂಪನಿಗಳು (ಡಿಸ್​ಕಾಂ) ಮತ್ತು ಗುತ್ತಿಗೆದಾರರು ಹಾಗೂ ರಿಯಲ್ ಎಸ್ಟೇಟ್​ಗಳಿಗೆ ತಲಾ ಒಂದು ಮತ್ತು ನೇರ ತೆರಿಗೆಗೆ ಸಂಬಂಧಿಸಿದ ಮೂರು ವಿನಾಯಿತಿಗಳ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಸುದೀರ್ಘ ಮಾಹಿತಿ ನೀಡಿದರು. ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಹಣಕಾಸು ಸಚಿವಾಲಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕಾಲ್ಪನಿಕ ಲೆಕ್ಕಾಚಾರದ ಮೂಲಕ 20 ಲಕ್ಷ ಕೋಟಿ ಪ್ಯಾಕೇಜ್

ಪ್ರಧಾನಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ ಎಂಬ ಆಕರ್ಷಕ ಪದಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಅನಾಥರನ್ನಾಗಿಸಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಲಾಕ್​ಡೌನ್​ನಿಂದ ತತ್ತರಿಸಿರುವ ಜನರು, ರೈತರು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಪ್ಯಾಕೇಜ್ ರೂಪಿಸಿರುವುದು ಸ್ಪಷ್ಟವಾಗಿದೆ. ಆದರೆ ಪ್ಯಾಕೇಜ್​ನಲ್ಲಿ ತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ ಎಂದಿದ್ದಾರೆ.

ಕರೊನಾದಿಂದ ಇಡೀ ದೇಶ ಸಂಕಷ್ಟದಲ್ಲಿದ್ದು, ಎಂದೂ ಕೇಳರಿಯದ ಕಷ್ಟದ ದಿನ ಎದುರಿಸುವಂತಾಗಿದೆ. ಇಂತಹ ದಿನಗಳಲ್ಲಿ ಎಲ್ಲ ವರ್ಗಗಳ ಜನರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಘೊಷಿಸಿರುವ 20 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಪ್ಯಾಕೇಜ್ ದುಡಿಯುವ ಕೈಗಳಿಗೆ ಆಸರೆಯಾಗಿದೆ. ರೈತರು, ಕಾರ್ವಿುಕರು ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಇಂಥದ್ದೊಂದು ಪ್ಯಾಕೇಜ್ ಘೊಷಿಸಿರುವುದು ಸಂದಭೋಚಿತವಾಗಿದೆ. ಸ್ವಾವಲಂಬಿ ಸಂಕಲ್ಪ ಹಾಗೂ ಸ್ವದೇಶಿ ವಸ್ತುಗಳ ಬಳಕೆ ಕುರಿತು ನೀಡಿರುವ ಕರೆ ಮುಂಬರುವ ದಿನಗಳಲ್ಲಿ ನೂತನ ಭಾಷ್ಯ ಬರೆಯಲಿದೆ.

| ಡಾ.ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ

ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ಯಾಕೇಜ್ ಘೊಷಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿರ್ಧಾರ ಕೈಗೊಂಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕಠಿಣ ಸನ್ನಿವೇಶದಲ್ಲಿ ಈ ಪ್ಯಾಕೇಜ್​ನಿಂದ ದೇಶದ ಹಲವು ವರ್ಗಗಳಿಗೆ ಅನುಕೂಲವಾಗಲಿದೆ.

ಶ್ರೀ ಶಿವಮೂರ್ತಿ ಮುರುಘಾ ಶರಣರು

ಎಂಎಸ್​ಎಂಇ ಕ್ಷೇತ್ರಕ್ಕೆ ಸರ್ಕಾರದಿಂದ ಏನೆಲ್ಲ ಸಹಾಯ ಮಾಡಬಹುದಿತ್ತೋ ಅದೆಲ್ಲವೂ ಕೇಂದ್ರದಿಂದ ಸಿಕ್ಕಿದೆ. ಎಂಎಸ್​ಎಂಇ ವ್ಯಾಖ್ಯೆ ಬದಲಾಯಿಸುವುದು, ಬೆಳೆಯುವ ಆಸೆಯಿರುವವರಿಗೆ ಅವಕಾಶ ನೀಡಿದಂತಾಗಿದೆ. ಉದ್ಯಮದ ಆಕಾಂಕ್ಷೆಗಳಿಗೆ ಈ ಸರ್ಕಾರ ಸೂಕ್ಷ್ಮವಾಗಿ ಸ್ಪಂದಿಸುತ್ತಿದೆ. ಇದಕ್ಕಾಗಿ ಅಭಿನಂದಿಸುತ್ತೇನೆ.

ಎಸ್. ಸಂಪತ್ ರಾಮನ್, ಅಖಿಲ ಭಾರತ ಉತ್ಪಾದಕರ ಸಂಘದ ಕರ್ನಾಟಕ ಘಟಕ ಅಧ್ಯಕ್ಷ

ಕೇಂದ್ರದ ಆರ್ಥಿಕ ಪ್ಯಾಕೇಜ್​ನ ಮೊದಲ ಭಾಗದಲ್ಲಿ ಪ್ರಧಾನಿ ಮೋದಿಯವರ ದೂರದೃಷ್ಟಿ ಕಾಣಿಸುತ್ತಿದೆ. ಸಣ್ಣ, ಸೂಕ್ಷ್ಮ, ಮಧ್ಯಮ ಕೈಗಾರಿಕೆಗಳಿಗೆ ಸಹಾಯ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.

| ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ.

1) ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯ ನೌಕರರು, ಅವರ ಉದ್ಯೋಗದಾತರು ಭವಿಷ್ಯ ನಿಧಿಗೆ (ಪಿಎಫ್) ತಲಾ ಶೇ. 12 ವಂತಿಗೆ ಜಮಾ ಮಾಡಬೇಕು. ಇದಕ್ಕೆ ಸರ್ಕಾರ ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಧನಸಹಾಯ ಮಾಡಿತ್ತು. ಈಗ ಮತ್ತೆ 2,500 ಕೋಟಿ ನೆರವು ಘೋಷಿಸಿ, ಜೂನ್​ನಿಂದ ಆಗಸ್ಟ್​ವರೆಗೂ ಸೌಲಭ್ಯ ವಿಸ್ತರಿಸಿದೆ.

ಪರಿಣಾಮ: ಹಣಕಾಸಿನ ಹರಿವು ಕಾಯ್ದುಕೊಳ್ಳುವ ಈ ನೆರವಿನಿಂದ 72.22 ಲಕ್ಷ ನೌಕರರು ಮತ್ತು 3.67 ಲಕ್ಷ ಕಂಪನಿಗಳಿಗೆ ಅನುಕೂಲವಾಗಲಿದೆ.

2) ನೌಕರರು ಮತ್ತು ಖಾಸಗಿ ಕಂಪನಿಗಳಿಗೆ ಇಪಿಎಫ್ ವಂತಿಗೆ ಪ್ರಮಾಣವನ್ನು ಶೇ. 12ರಿಂದ 10ಕ್ಕೆ ಇಳಿಸಲಾಗಿದ್ದು, ಮುಂದಿನ ಮೂರು ತಿಂಗಳಿಗೆ ಅನ್ವಯವಾಗಲಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧೀನದ ಸಾರ್ವಜನಿಕ ಉದ್ದಿಮೆಗಳು ಮತ್ತು ಅವುಗಳ ನೌಕರರಿಗೆ ಇದರಿಂದ ವಿನಾಯಿತಿ ಇಲ್ಲ. ಅವು ಶೇ. 12 ವಂತಿಗೆ ಪಾವತಿಸಬೇಕು. ಈ ಸೌಲಭ್ಯ ಶೇ.24 ಇಪಿಎಫ್ ಬೆಂಬಲ ಇರುವಂತಹ ಪಿಎಂಜಿಕೆಪಿಗೆ ಒಳಪಡುವ ನೌಕರರಿಗೆ ಅನ್ವಯವಾಗುವುದಿಲ್ಲ.

ಪರಿಣಾಮ: ನೌಕರ ಮತ್ತು ಉದ್ಯೋಗದಾತ ಕಂಪನಿಗಳಿಗೆ ಇನ್ನೂ ಮೂರು ತಿಂಗಳ ಕಾಲ 6,750 ಕೋಟಿ ರೂಪಾಯಿ ಹರಿವನ್ನು ಹೆಚ್ಚಿಸಲಿದೆ.

ವ್ಯವಹಾರಗಳು, ವಿಶೇಷವಾಗಿ ಎಂಎಸ್​ಎಂಇ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಪ್ರಕಟಣೆಗಳು ಬಹಳ ದೂರ ಸಾಗುತ್ತವೆ. ಘೋಷಿಸಿರುವ ಹಂತಗಳು ಹಣದ ಹರಿವನ್ನು ಹೆಚ್ಚಿಸುತ್ತದೆ, ಉದ್ಯಮಿಗಳಿಗೆ ಅಧಿಕಾರ ನೀಡುತ್ತದೆ ಮತ್ತು ಅವರ ಸ್ಪರ್ಧಾತ್ಮಕ ಮನೋಭಾವನನ್ನು ಬಲಪಡಿಸುತ್ತದೆ.

| ನರೇಂದ್ರ ಮೋದಿ ಪ್ರಧಾನ ಮಂತ್ರಿ

ಎರಡು ದಿನದಲ್ಲಿ ಇನ್ನಷ್ಟು ಘೋಷಣೆ

20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಸ್ವಾವಲಂಬಿ ಭಾರತದ ನಿರ್ವಣಕ್ಕೆ ಪರಿಣಾಮಕಾರಿಯಾಗಿ ಬಳಸಲು ಹತ್ತು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಇನ್ನಷ್ಟು ವಲಯ ಮತ್ತು ವರ್ಗದವರಿಗೆ ದೊರೆಯುವ ಅನುಕೂಲಗಳನ್ನು ಪ್ರಕಟಿಸುತ್ತೇವೆ.

| ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವೆ

ಎಂಎಸ್​ಎಂಇಗೆ ಕೇಂದ್ರ 3 ಲಕ್ಷ ಕೋಟಿ ರೂ. ನೆರವಿನ ಪ್ಯಾಕೇಜ್ ಪ್ರಕಟಿಸಿರುವುದು ಸ್ವಾಗತಾರ್ಹ. ಇದು ದೇಶದ ಉದ್ಯಮಿಗಳು, ಕಾರ್ವಿುಕ ವರ್ಗ ಆರ್ಥಿಕವಾಗಿ ಪುನಶ್ಚೇತನಗೊಳ್ಳುವುದಕ್ಕೆ ವರದಾನವಾಗಿದೆ. ಕರೊನಾದಿಂದ ತತ್ತರಿಸಿರುವ ಜಗತ್ತಿನ ಯಾವುದೇ ದೇಶ ಔದ್ಯೋಗಿಕ ವಲಯಕ್ಕೆ ಇಂತಹ ಆರ್ಥಿಕ ಪುನಶ್ಚೇತನ ಪ್ರಕಟಿಸಿಲ್ಲ ಎಂದರೆ ಅತಿಶಯೋಕ್ತಿಯಲ್ಲ.

| ಬಿ.ಎಸ್.ಯಡಿಯೂರಪ್ಪ ಸಿಎಂ