ಲಖನೌ: ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಘಿನೊಐ ಎಂಬ ಗ್ರಾಮದ ಬಳಿ ಟ್ರಕ್ ಡಿಕ್ಕಿಯಿಂದ ಬೆಂಕಿ ಹೊತ್ತಿಕೊಂಡು ಬಸ್ನಲ್ಲಿದ್ದ 20 ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಅವಘಡ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಬಸ್ನಲ್ಲಿ ಒಟ್ಟು 46 ಪ್ರಯಾಣಿಕರಿದ್ದರು. ಇದರಲ್ಲಿ ನಿನ್ನೆಯೇ 20 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.
ಜೈಪುರ ಕಡೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಉಂಟಾದ ಬೆನ್ನಲ್ಲೇ ಬಸ್ಗೆ ಬೆಂಕಿ ತಗುಲಿ ದುರ್ಘಟನೆ ಘಟಿಸಿದೆ. ಘಟನೆಯಲ್ಲಿ ಟ್ರಕ್ಗೂ ಬೆಂಕಿ ತಗುಲಿದೆ.
ಘಟನೆ ಬಗ್ಗೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಕನೌಜ್ ಎಂಬಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದನ್ನು ಕೇಳಿ ದುಃಖವಾಯಿತು. ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾವಿಗೀಡಾದವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಾ, ಗಾಯಗೊಂಡವರು ಬೇಗ ಗುಣಮುಖರಾಗಲು ಬಯಸುತ್ತೇನೆಂದು ಇಂದು ಬೆಳಗ್ಗೆ ಹಿಂದಿಯಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಎರಡು ವಾಹನಗಳಲ್ಲಿ ಧಗಧಗನೇ ಉರಿಯುತ್ತಿದ್ದ ಬೆಂಕಿಯ ಜ್ವಾಲೆಯನ್ನು ನಂದಿಸಲು ಮೂರರಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಸುಮಾರು 30 ರಿಂದ 40 ನಿಮಿಷ ಶ್ರಮಿಸಿವೆ ಎಂದು ತಿಳಿದುಬಂದಿದೆ.
ಬಸ್ನಲ್ಲಿದ್ದ ಗಾಯಗೊಂಡ ಪ್ರಯಾಣಿಕ ರಾಮ್ಸೇನ್, ಲಾರಿಗೆ ಡಿಕ್ಕಿ ಹೊಡೆದಾಗ ಬಸ್ನಲ್ಲಿ ಬೆಂಕಿ ಕಾಣಿಸಿತು. ನಾನು ಕಿಟಕಿ ಗಾಜು ಒಡೆದು ಹೊರಬಂದೆ ಎಂದು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು. (ಏಜೆನ್ಸೀಸ್)