ವಿಜಯಪುರ: ಆಟವಾಡುವ ಗುಂಗಿನಲ್ಲಿ ತೆರೆದಿದ್ದ ಕೊಳವೆ ಬಾವಿಗೆ ಎರಡು ವರ್ಷದ ಮಗುವೊಂದು ಆಯಾತಪ್ಪಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಸಂಭವಿಸಿದೆ.
ಆಟವಾಡಲು ಹೋಗಿ ಕೊಳೆವೆ ಬಾವಿಗೆ ಬಿದ್ದ ಬಾಲಕನ ಸುದ್ದಿ ತಿಳಿದ ಪೋಷಕರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯ ಕೋರಿದ್ದಾರೆ. ಬಾವಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಭೀಮಾತೀರದಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನೊಂದರಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದೆ. ಸಾತ್ವಿಕ ಮುಜಗೊಂಡ (2) ಎಂಬ ಹೆಸರಿನ ಮಗು ಕೊಳವೆ ಬಾವಿಗೆ ಬಿದ್ದಿದ್ದು, ಪೋಷಕರ ಆಕ್ರಂದನ ಕರಳು ಹಿಂಡುವಂತಿದೆ. ಘಟನೆ ತಿಳಿದು ಇಡೀ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿದ್ದು, ಇಂಡಿ ತಾಲೂಕಿನ ಕೇಂದ್ರದಿಂದ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಮುಂದುವರೆದಿದ್ದು, ಘಟನೆ ಇಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.