ನ್ಯೂಸ್

ಜಡ್ಜ್​ ಚೇಂಬರಿಗೆ ನುಗ್ಗಿ ಹಲ್ಲೆ ಮಾಡಿದ ಪೊಲೀಸರು! ರಾಜ್ಯದ ಡಿಜಿಪಿಗೆ ಹೈಕೋರ್ಟ್​ ಬುಲಾವ್​

ಪಟ್ನಾ: ಇಬ್ಬರು ಪೊಲೀಸ್​ ಅಧಿಕಾರಿಗಳು ನ್ಯಾಯಾಧೀಶರೊಬ್ಬರ ಚೇಂಬರ್​​ಗೆ ನುಗ್ಗಿ ನಿಂದಿಸಿದ್ದಲ್ಲದೆ ಅವರ ಮೇಲೆ ಶಾರೀರಿಕ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಮಧುಬಾನಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಅವಿನಾಶ್​ ಕುಮಾರ್​ ಹಲ್ಲೆಗೊಳಗಾದ ನ್ಯಾಯಾಧೀಶರು. ಈ ಬಗ್ಗೆ ಸುಯೋ ಮೋಟೋ ಕೇಸು ದಾಖಲಿಸಿಕೊಂಡಿರುವ ಪಟ್ನಾ ಹೈಕೋರ್ಟ್​, ರಾಜ್ಯದ ಪೊಲೀಸ್​ ಮುಖ್ಯಸ್ಥರನ್ನು ಖುದ್ದು ಹಾಜರಾಗಿ ವರದಿ ನೀಡುವಂತೆ ಆದೇಶಿಸಿದೆ.

ಘೋಘರ್ದಿಹ ಠಾಣಾಧಿಕಾರಿ ಗೋಪಾಲ್​ ಕೃಷ್ಣ ಮತ್ತು ಸಬ್​ ಇನ್​ಸ್ಪೆಕ್ಟರ್​ ಅಭಿಮನ್ಯು ಕುಮಾರ್​ ಶರ್ಮಾ ಎಂಬುವರು ಗುರುವಾರದಂದು ಝಾಝರ್​​ಪುರದ ಕೋರ್ಟ್​ ಸಂಕೀರ್ಣದಲ್ಲಿರುವ ನ್ಯಾಯಾಧೀಶರ ಕೊಠಡಿಗೆ ನುಗ್ಗಿ ಅವರನ್ನು ನಿಂದಿಸಲು ಶುರುಮಾಡಿದರು. ನಂತರ ಅವರನ್ನು ಎಳೆದಾಡಿ ತಮ್ಮ ಸರ್ವೀಸ್​ ರಿವಾಲ್ವರ್​ಗಳನ್ನು ತೋರಿಸಿ ಬೆದರಿಸಿದರು. ಶಬ್ದ ಕೇಳಿ ಕಾರಿಡಾರಿನಲ್ಲಿದ್ದ ವಕೀಲರು ಮತ್ತು ಸಿಬ್ಬಂದಿ ಒಳಗೆ ಬಂದು ಆ ಪೊಲೀಸರನ್ನು ಥಳಿಸಿ, ನ್ಯಾಯಾಧೀಶರನ್ನು ರಕ್ಷಿಸಿದರು ಎನ್ನಲಾಗಿದೆ.

ನ್ಯಾಯಾಧೀಶರ ದೂರಿನ ಮೇರೆಗೆ ಗುರುವಾರ ಸಂಜೆ ಈ ಬಗ್ಗೆ ವಿಚಾರಣೆ ನಡೆಸಿದ ಪಟ್ನಾ ಹೈಕೋರ್ಟ್​, ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥ ಪ್ರಸಂಗ ಎಂದು ಅಭಿಪ್ರಾಯಪಟ್ಟಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಮಧುಬಾನಿ ಎಸ್ಪಿಗೆ ನೋಟೀಸ್ ಜಾರಿಗೊಳಿಸಿದೆ. ಬಿಹಾರ ಡಿಜಿಪಿ ಎಸ್​.ಕೆ.ಸಿಂಘಾಲ್​ ಅವರಿಗೆ ಈ ಬಗ್ಗೆ ಸೀಲ್ಡ್​​ ಕವರ್​ನಲ್ಲಿ ಸ್ಟೇಟಸ್​ ರಿಪೋರ್ಟ್​ ಸಲ್ಲಿಸಲು ಆದೇಶಿಸಿರುವ ಹೈಕೋರ್ಟ್​, ನವೆಂಬರ್​ 29 ರಂದು ನಡೆಯುವ ಮುಂದಿನ ವಿಚಾರಣೆಗೆ ಕೋರ್ಟ್​​ ಮುಂದೆ ಖುದ್ದು ಹಾಜರಾಗಲು ಸೂಚಿಸಿದೆ.

ಝಾಝರ್​ಪುರ ವಕೀಲರ ಸಂಘವು ಈ ಘಟನೆಯನ್ನು ಖಂಡಿಸಿದೆ. ಹಲ್ಲೆ ನಡೆಸಿದ ಪೊಲೀಸ್​ ಅಧಿಕಾರಿಗಳ ವಿರುದ್ಧ ಇತ್ತೀಚೆಗೆ ನ್ಯಾಯಾಧೀಶ ಅವಿನಾಶ್​ ಕುಮಾರ್​ ಆದೇಶವನ್ನು ಹೊರಡಿಸಿದ್ದರು. ಇದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.​ (ಏಜೆನ್ಸೀಸ್)