ನ್ಯೂಸ್

ಕಾಡು ಹಂದಿಗೆ ನಿರ್ಮಿಸಿದ್ದ ವಿದ್ಯುತ್​ ಬಲೆಗೆ ಇಬ್ಬರು ಯುವಕರು ಬಲಿ; ಶವ ಅಡಗಿಸಿದ್ದ ಜಮೀನಿನ ಮಾಲೀಕ!

ಕೇರಳ: ಕಾಡು ಹಂದಿಗಳ ಸೆರೆಗೆ ನಿರ್ಮಿಸಲಾಗಿದ್ದ ವಿದ್ಯುತ್ ಬಲೆಗೆ ಸಿಲುಕಿದ ಇಬ್ಬರು ಯುವಕರು ವಿದ್ಯುತ್​ ಸ್ಪರ್ಶದಿಂದ ಸಾವನ್ನಪ್ಪಿದ್ದು, ಭೂಮಾಲೀಕ ಇಬ್ಬರನ್ನು ತನ್ನ ಜಮೀನಿನಲ್ಲಿ ಮಣ್ಣು ಮಾಡಿದ ಘಟನೆ ಕೇರಳ ಜಿಲ್ಲೆಯ ಪಾಲಕ್ಕಾಡ್​ನಲ್ಲಿ ವರದಿಯಾಗಿದೆ.

ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಮೃತಪಟ್ಟ ಇಬ್ಬರು ಯುವಕರ ಶವಗಳನ್ನು ತನ್ನ ಭೂ ಜಾಗದಲ್ಲಿ ಮಣ್ಣು ಮಾಡಿದ್ದ ವ್ಯಕ್ತಿಯನ್ನು ಇದೀಗ ಕೇರಳ ಪೊಲೀಸರು ಬಂಧಿಸಿದ್ದಾರೆ. ಕಾಡು ಹಂದಿಗಳಿಗೆ ಹಾಕಲಾಗಿದ್ದ ಬಲೆಯಿಂದ ಇಬ್ಬರು ವ್ಯಕ್ತಿಗಳು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಮೃತಪಟ್ಟ ಯುವಕರನ್ನು ಸತೀಶ್ (22) ಮತ್ತು ಶಿಜಿತ್ (22) ಎಂದು ಗುರುತಿಸಲಾಗಿದ್ದು, ಇಬ್ಬರು ಆರೋಪಿಯ ಹೊಲದಲ್ಲಿ ಸಂಚರಿಸುವ ವೇಳೆ ಈ ಘಟನೆ ಸಂಭವಿಸಿದೆ. ವಿದ್ಯುತ್ ತಗುಲಿದ ಸ್ಥಳದಿಂದ 10 ಮೀಟರ್ ದೂರದಲ್ಲಿ ಮಣ್ಣುಮಾಡಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. 70 ಸೆಂ.ಮೀ ಆಳದ ಗುಂಡಿಯಲ್ಲಿ ಯುವಕರ ಶವಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಆರೋಪಿಯನ್ನು 52 ವರ್ಷದ ಅನಂತನ್ ಎಂದು ಬಹಿರಂಗಪಡಿಸಿದ ಪೊಲೀಸರು, "ವ್ಯಕ್ತಿ ಭಯಭೀತರಾಗಿ ಶವಗಳನ್ನು ಹೂತುಹಾಕಿದ್ದನ್ನು ಒಪ್ಪಿಕೊಂಡಿದ್ದಾನೆ. ಯುವಕರ ಸಾವಿಗೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂಬುದರ ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).