ನ್ಯೂಸ್

ಗುಜರಾತಲ್ಲಿ ಇನ್ನೆರಡು ಒಮಿಕ್ರಾನ್​ ಪ್ರಕರಣ; ದೇಶದಲ್ಲಿರುವ ಕರೊನಾ ಸೋಂಕಿತರೆಷ್ಟು?

ಗಾಂಧಿನಗರ: ಗುಜರಾತಿನಲ್ಲಿ ಹೊಸದಾಗಿ ಇನ್ನಿಬ್ಬರು ಭಾರತೀಯರಲ್ಲಿ ಒಮಿಕ್ರಾನ್​ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಈ ರಾಜ್ಯದಲ್ಲಿ ಮೂರು ಒಮಿಕ್ರಾನ್​ ಕೇಸುಗಳು ವರದಿಯಾಗಿದ್ದು, ದೇಶದ ಒಟ್ಟು ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 23 ಮುಟ್ಟಿದೆ.

ಡಿಸೆಂಬರ್​ 4 ರಂದು ದಕ್ಷಿಣ ಆಫ್ರಿಕಾದ ಜಿಂಬಾಂಬ್ವೆಯಿಂದ ಜಾಮ್​ನಗರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ವ್ಯಕ್ತಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಜೀನೋಮ್​ ಸೀಕ್ವೆಂಸಿಂಗ್​ನಲ್ಲಿ ಒಮಿಕ್ರಾನ್​ ರೂಪಾಂತರಿ ಎಂದು ಪತ್ತೆಯಾಗಿತ್ತು. ಇದೀಗ ಆ ವ್ಯಕ್ತಿಯ ಸಂಪರ್ಕಿತರಿಬ್ಬರಲ್ಲಿ ಇದೇ ಸೋಂಕು ಕಾಣಿಸಿಕೊಂಡಿದೆ.

ಇನ್ನು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ವರದಿಯಾದ ಒಟ್ಟು ಕರೊನಾ ಪ್ರಕರಣಗಳ ಸಂಖ್ಯೆ 8,503 ಆಗಿದೆ. ಇದು ನಿನ್ನೆ ವರದಿಯಾದ ಸಂಖ್ಯೆಗಿಂತ ಶೇಕಡ 9.7 ರಷ್ಟು ಕಡಿಮೆಯಾಗಿದೆ. ಇನ್ನೂ 624 ಜನರು ಕರೊನಾಗೆ ಬಲಿಯಾಗಿದ್ದು, ಒಟ್ಟು ಸಾವುಗಳ ಸಂಖ್ಯೆ 4,74,735 ತಲುಪಿದೆ. ದೇಶದಲ್ಲಿ ಹಾಲಿ 94,943 ಕೋವಿಡ್​ 19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)