ನ್ಯೂಸ್

ನಡೆಯುವ ವೇಳೆ ಭುಜ ತಾಕಿಸಿದ್ದಕ್ಕೆ ಹತ್ಯೆ

ಘಾಜಿಯಾಬಾದ್​: ನಡೆದುಕೊಂಡು ಹೋಗುತ್ತಿದ್ದ ವೇಳೆ ಭುಜ ತಾಕಿಸಿದ ಎಂಬ ಕಾರಣಕ್ಕೆ ಯುವಕನೋರ್ವನನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನ ಲಾಲ್​ಕುವಾನ್​ ಎಂಬ ಪ್ರದೇಶದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ವಿನಯ್​ ಯಾದವ್​(19) ಎಂದು ಗುರುತಿಸಲಾಗಿದ್ದು, ಘಟನೆಯು ಮಂಗಳವಾರ ತಡರಾತ್ರಿ 1 ಘಂಟೆ ಸುಮಾರಿಗೆ ನಡೆದಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ವೈರತ್ವ ಇರಲಿಲ್ಲ

ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿನಯ್​ ತಂದೆ ರಾಜು ಯಾದವ್ ನನ್ನ ಮಗ ಮನೆಯಿಂದ 100 ಮೀಟರ್​ ದೂರದಲ್ಲಿ ಹೋಟೆಲ್​ ಒಂದನ್ನು ನಡೆಸುತ್ತಿದ್ದ. ಮಂಗಳವಾರ ತಡರಾತ್ರಿ 1:00 ಘಂಟೆ ಸುಮಾರಿಗೆ ಹೋಟೆಲ್​ ಬಾಗಿಲು ಹಾಕಿ ಸಹೋದರ ಪುಷ್ಪೇಂದ್ರ(25) ಹಾಗೂ ಸಂಬಂಧಿ ಬಾಬಿ ಸಿಂಗ್​(40) ಜೊತೆ ಮನೆಗೆ ವಾಪಸ್​ ಬರುತ್ತಿದ್ದ ವೇಳೆ ಎದುರಿನಲ್ಲಿ ಬರುತ್ತಿದ್ದವರ ಭುಜ ತಾಕಿಸಿದ ಎಂಬ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ಆತನ ಜೊತೆ ಗಲಾಟೆ ತೆಗೆದು ಹಲ್ಲೆ ನಡೆಸಲು ಶುರು ಮಾಡಿದ್ದಾರೆ.

ಈ ವೇಳೆ ಜತೆಯಲ್ಲಿದ್ದವರು ಜಗಳ ಬಿಡಿಸಲು ಮುಂದಾದರು ಸಹ ಅವರ ಮೇಲಯೂ ಸಹ ಹಲ್ಲೆ ಮಾಡಿ ಪರಅರಿಯಾಗಿದ್ದಾರೆ. ಕೂಡಲೇ ಗಹಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನನ್ನ ಮಗನಿಗೆ ಯಾರ ಜೊತೆಯೂ ವೈರತ್ವ ಇರಲಿಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತ ವಿನಯ್​ ತಂದೆ ರಾಜು ಯಾದವ್​ ಆಗ್ರಹಿಸಿದ್ದಾರೆ.

ಆರೋಪಿಗಳು ಸ್ಥಳೀಯರು

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಎಸಿಪಿ ಸಲೋನಿ ಅಗರ್​ವಾಲ್​ ಇಬ್ಬರು ಆರೋಪಿಗಳ ಪೈಕಿ ಓರ್ವ ಭುಜ ತಾಕಿಸಿದ ಎಂಬ ಕಾರಣಕ್ಕೆ ಗಲಾಟೆ ತೆಗೆದು ವಿನಯ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಇಬ್ಬರು ಆರೋಪಿಗಳು ಸ್ಥಳೀಯರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇಬ್ಬರು ಆರೋಪಿಗಳು ಯಾವುದೇ ಆಯುಧ ಬಳಸದೆ ಕೊಲೆ ಮಾಡಿರುವುದು ಕಂಡು ಬಂದಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಲಾಗುವುದು ಎಂದು ಎಸಿಪಿ ಸಲೋನಿ ಅಗರ್​ವಾಲ್ ತಿಳಿಸಿದ್ದಾರೆ.