ನ್ಯೂಸ್

ಎರಡು ಗ್ರಾಮಗಳ ನಡುವಿನ 2 ಕಿ.ಮೀ ರಸ್ತೆಯೇ ಮಂಗಮಾಯ! ಕಾರಣ ಹುಡುಕಿ ಹೊರಟವರಿಗೆ ಕಾದಿತ್ತು ಶಾಕ್​

ಪಟನಾ: ಸುಮಾರು 2 ಕಿ.ಮೀ ದೂರದ ರಸ್ತೆ ಕಳ್ಳತನವಾಗಿರುವ ಸುದ್ದಿಯನ್ನು ಎಂದಾದರೂ ಕೇಳಿದ್ದೀರಾ? ಈ ಪ್ರಶ್ನೆಗೆ ಬಹುತೇಕರು ಇಲ್ಲ ಅಂತಾನೆ ಉತ್ತರ ಕೊಡುತ್ತಾರೆ. ರಸ್ತೆ ಪಕ್ಕದ ಅಥವಾ ನಡುವಿನ ವಿದ್ಯುತ್​ ಕಂಬಗಳಲ್ಲಿರುವ ವಿದ್ಯುತ್​ ಬಲ್ಬ್​ ಹಾಗೂ ರಸ್ತೆ ಪಕ್ಕದ ಗಿಡಗಳನ್ನು ಕದಿಯುವುದನ್ನು ಕೇಳಿರುತ್ತೇವೆ. ರಸ್ತೆಯೇ ಕಳ್ಳತನವಾಗಿದೆ ಎಂಬುದು ತುಸು ವಿಚಿತ್ರವಾದರೂ ಇದು ಬಿಹಾರದಲ್ಲಿ ನಿಜವಾಗಿಯೂ ನಡೆದಿದೆ.

ಈ ವಿಚಿತ್ರ ಪ್ರಕರಣ ಬಿಹಾರದ ಬಂಕಾ ಜಿಲ್ಲೆಯ ಖರೌನಿಯ ರಾಜೌನ್​ ಬ್ಲಾಕ್​ ಮತ್ತು ಖದಾಂಪುರ್​ ಗ್ರಾಮಗಳಿಗೆ ಸಂಬಂಧಿಸಿದ್ದಾಗಿದೆ. ಎರಡು ಗ್ರಾಮಗಳ ನಡುವಿನ ಎರಡು ಕಿ.ಮೀ ದೂರದ ರಸ್ತೆ ಸಂಪರ್ಕ ಕೊಂಡಿಯಾಗಿತ್ತು. ಗ್ರಾಮಸ್ತರು ಹಲವು ವರ್ಷಗಳಿಂದ ರಸ್ತೆಯನ್ನು ಬಳಸುತ್ತಿದ್ದಾರೆ. ಆದರೆ, ಇತ್ತೀಚಿಗೆ ಎರಡೂ ಗ್ರಾಮದ ಜನರು ಎಂದಿನಂತೆ ಬೆಳಗ್ಗೆ ಎದ್ದು ನಡೆದು ಹೋಗುವಾಗ ಅವರಿಗೆ ಅಚ್ಚರಿಯ ಜತೆಗೆ ಆಘಾತವೊಂದು ಕಾದಿತ್ತು. ಏಕೆಂದರೆ, ತಾವು ನಿತ್ಯವು ನಡೆದಾಡುತ್ತಿದ್ದ ರಸ್ತೆಯೇ ಮಂಗಮಾಯವಾಗಿತ್ತು ಮತ್ತು ಆ ಜಾಗದಲ್ಲಿ ಗೋಧಿ ಬೆಳೆ ಇದ್ದುದ್ದನ್ನು ನೋಡಿ ಚಕಿತಗೊಂಡರು.

ಆರಂಭದಲ್ಲಿ ತಾವು ದಾರಿ ತಪ್ಪಿದ್ದೇವಾ ಎಂಬ ಗೊಂದಲು ಕಾಡತೊಡಗಿತು. ಆದರೂ ಪ್ರತಿನಿತ್ಯ ಓಡಾಡುವುದರಿಂದ ತಮ್ಮ ರಸ್ತೆಯ ಬಗ್ಗೆ ಚೆನ್ನಾಗಿಯೇ ತಿಳಿದಿದ್ದ ಗ್ರಾಮಸ್ಥರು ನಂತರ ಏನಾಗಿದೆ ಎಂದು ಕಾರಣ ಹುಡುಕಲು ಆರಂಭಿಸಿದರು. ಅಷ್ಟಕ್ಕೂ ನಡೆದಿದ್ದೇನೆಂದರೆ, ಖರೌನಿ ಗ್ರಾಮದ ಕೆಲವು ಗೂಂಡಾಗಳು ರಸ್ತೆಯನ್ನು ಟ್ರ್ಯಾಕ್ಟರ್​ನಿಂದ ಉಳುಮೆ ಮಾಡಿ, ಆ ಜಾಗಕ್ಕೆ ಗೋಧಿ ಬೆಳೆ ಬಿತ್ತಿದ್ದಾರೆ. ಇದನ್ನು ಖದಾಂಪುರ್​ ಗ್ರಾಮಸ್ಥರು ವಿರೋಧಿಸಿದಾಗ ಅವರೊಂದಿಗೆ ಜಗಳವಾಡಿದ ಗೂಂಡಾಗಳು ದೊಣ್ಣೆಗಳಿಂದ ಥಳಿಸಿ ಬೆದರಿಸಿದ್ದಾರೆ.

ಈ ಘಟನೆಯ ನಂತರ ಗ್ರಾಮದಲ್ಲಿ ಸಂಚಲನ ಉಂಟಾಯಿತು. ವರ್ಷಾನುಗಟ್ಟಲೆ ಬಂದು ಹೋಗಲು ಇದೇ ರಸ್ತೆಯನ್ನು ಬಳಸುತ್ತಿರುವುದರಿಂದ ಇದೀಗ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕಳೆದ ಕೆಲ ದಿನಗಳಿಂದ ಖದಾಂಪುರ ಗ್ರಾಮದ ಜನರು ಫುಟ್‌ಪಾತ್‌ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ಖಾದಂಪುರ ಗ್ರಾಮದ ಸುಮಾರು 35 ಮಂದಿ ಬುಧವಾರ ಸರ್ಕಲ್ ಆಫೀಸರ್ ಮಹಮ್ಮದ್ ಮೊಯಿನುದ್ದೀನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ ಅಧಿಕಾರಿ, ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಕೃಷಿಗೆ ಬಳಸುತ್ತಿರುವ ಅತಿಕ್ರಮಣ ಭೂಮಿಯನ್ನು ತೆರವುಗೊಳಿಸಿ ಮತ್ತೆ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)