| ಮಂಜುನಾಥ ಕೆ. ಬೆಂಗಳೂರು
ಶಾಲಾ ಶಿಕ್ಷಕರ ನೇಮಕಾತಿಗೆ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಕಟ್ಟುನಿಟ್ಟಿನ ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ, ಒಂದೇ ಅಭ್ಯರ್ಥಿ ಎರಡು- ಮೂರು ಕಡೆ ಅರ್ಜಿಯನ್ನು ಸಲ್ಲಿಸಿರುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಮೇ 21 ಮತ್ತು 22 ರಂದು ಪರೀಕ್ಷೆ ನಿಗದಿಯಾಗಿದೆ. ಆದರೆ ಇತ್ತೀಚೆಗೆ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಈ ಬಾರಿ ಅತ್ಯಂತ ಕಟ್ಟುನಿಟ್ಟಾಗಿ ಅಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರಿ ೕಕ್ಷೆ (ನೀಟ್) ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಪರೀಕ್ಷೆಗೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆದರೆ, ಬಹುತೇಕರು ಎರಡು-ಮೂರು ಕಡೆ ಅರ್ಜಿ ಸಲ್ಲಿಸಿದ್ದಾರೆ.
ಯಾರು, ಎಷ್ಟೇ ಅರ್ಜಿ ಸಲ್ಲಿಸಿರಲಿ, ಅರ್ಜಿಗೆ ಅನುಗುಣವಾಗಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಿರುವುದರಿಂದ ಅದಕ್ಕೆ ತಕ್ಕಂತೆ ಪರೀಕ್ಷಾ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಅಭ್ಯರ್ಥಿ ಅಂತಿಮವಾಗಿ ಒಂದು ಕೇಂದ್ರದಲ್ಲಿ ಮಾತ್ರ ಪರೀಕ್ಷೆ ಬರೆಯುತ್ತಾನೆ. ಇದರಿಂದ ಉಳಿದ ಕಡೆಗಳಲ್ಲಿ ಕೈಗೊಂಡ ವ್ಯವಸ್ಥೆಗಳು ಅನವಶ್ಯಕ ಎನಿಸಲಿವೆ.
ಕಾಗದದ ಕೊರತೆ: ರಷ್ಯಾ- ಯುಕ್ರೇನ್ ಯುದ್ದದ ಪರಿಣಾಮ ಕಾಗದದ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ಹೆಚ್ಚಿನ ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆಗಳನ್ನು ಮುದ್ರಣ ಮಾಡುವುದರಿಂದ ಕಾಗದ ಜತೆಗೆ ನೈಸರ್ಗಿಕ ಸಂಪನ್ಮೂಲಗಳು ವ್ಯರ್ಥವಾಗುತ್ತದೆ. ಇಂಥ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ.
ಹೆಚ್ಚು ಹುದ್ದೆ ಮೀಸಲಾತಿ ಸೆಳೆತ: ಅರ್ಜಿ ಸಲ್ಲಿಸುವ ವೇಳೆಗೆ ಯಾವ ಜಿಲ್ಲೆ ಎಂಬ ಗೊಂದಲ ಬಗೆಹರಿಸಿಕೊಳ್ಳಲಾಗದ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹೆಚ್ಚು ಹುದ್ದೆ, ಅದರಲ್ಲೂ ಮೀಸಲಾತಿ ಅನ್ವಯವಾಗುವಂತೆ ಹೆಚ್ಚು ಅವಕಾಶಗಳು ಇರುವಲ್ಲಿ ಅರ್ಜಿ ಸಲ್ಲಿಸಲು ಹೆಚ್ಚು ಉತ್ಸುಕತೆ ತೋರುತ್ತಾರೆ. ಇನ್ನೊಂದೆಡೆ, ಕಳೆದ ಬಾರಿ ಕಡಿಮೆ ಕಟ್-ಆಫ್ ಅಂಕಗಳು ನಿಗದಿಯಾಗಿರುವುದು ಈ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಸರ್ಕಾರ ಏನು ಮಾಡಬಹುದು?: ಅಂತಿಮವಾಗಿ ಒಂದೇ ಕಡೆ ಪರೀಕ್ಷೆ ಬರೆಯಲು ಸಾಧ್ಯವಾಗುವುದರಿಂದ ಪರೀಕ್ಷೆಗೂ ಮುನ್ನ ಯಾವ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ ಎನ್ನುವುದನ್ನು ಆಯಾ ಅಭ್ಯರ್ಥಿಗಳಿಂದಲೇ, ಅರ್ಜಿ ಸಂಖ್ಯೆ ಆಧಾರದಲ್ಲಿ ಅದಕ್ಕೆ ತಕ್ಕಂತೆ ಪರೀಕ್ಷಾ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎಂಬ ಸಲಹೆ ತಜ್ಞರದ್ದಾಗಿದೆ.