Heart attack: ದಸರಾ ನಿಮಿತ್ತ ಮಧ್ಯಪ್ರದೇಶದ ಖಾರ್ಗೋನ್ನಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ನೃತ್ಯ ಮಾಡುತ್ತಿರುವಂತಹ ಸಂದರ್ಭದಲ್ಲಿ 19 ವರ್ಷದ ಯುವತಿಯೊಬ್ಬಳು ಹೃದಯಾಘಾತಕ್ಕೆ ಒಳಗಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ಭಿಕನ್‌ಗಾಂವ್ ತಹಸಿಲ್‌ನ ಪಲಾಸಿ ನಿವಾಸಿ ಸೋನಮ್ ಮೃತಳು ಎಂದು ತಿಳಿದುಬಂದಿದೆ. ಈಗ ತನ್ನ ಪತಿಯೊಂದಿಗೆ ಗ್ರಾಮದಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಗರ್ಬಾ ನೃತ್ಯ ಪ್ರದರ್ಶಿಸುವಾಗ ಇದ್ದಕ್ಕಿದ್ದಂತೆ ನೆಲಕ್ಕುರುಳಿ ಬಿದ್ದಿದ್ದಾರೆ. ಘಟನೆ ನಡೆದ ಬಳಿಕ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆಯಷ್ಟೇ ಸೋನಮ್ ಹಾಗೂ ಪತಿ ಕೃಷ್ಣಪಾಲ್ ಜೊತೆ ವಿವಾಹವಾಗಿದ್ದರು. ಇವರಿಬ್ಬರು ಓ ಮೇರೆ ಧೋಲ್ನಾ ಹಾಡಿಗೆ ನೃತ್ಯ ಮಾಡುತ್ತಿರುವಂತಹ ಸಮಯದಲ್ಲಿ ಮಹಿಳೆಯು ತಕ್ಷಣಕ್ಕೆ ನೆಲಕ್ಕೆ ಬಿದ್ದಿದ್ದಾಳೆ. ನೃತ್ಯವನ್ನು ನೋಡುತ್ತಿದ್ದ ಜನರು ಆಕೆಯ ಬೀಳುವಿಕೆಯನ್ನು ನೃತ್ಯದ ಪ್ರದರ್ಶನ ಎಂದು ನಂಬಿದ್ದರು. ಆದರೆ ಆಕೆ ದೀರ್ಘ ಕಾಲದವರೆಗೂ ಮೇಲೆ ಏಳದೆ ಇರುವುದರಿಂದ ಆಘಾತಗೊಂಡಿದ್ದು, ಆಕೆಯನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ವೈದ್ಯರನ್ನು ಸಂಪರ್ಕಿಸುವ ಹೊತ್ತಿನಲ್ಲೇ ಆಕೆಯ ಉಸಿರಾಟ ನಿಂತು ಹೋಯಿತು ಎಂದು ಸ್ಥಳೀಯರು ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.
ಆ ಸಂಜೆ ಗಾರ್ಬಾ ವೃತ್ತಕ್ಕೆ ಸೇರುವ ಮೊದಲು ಯುವ ವಧು ಆರೋಗ್ಯವಾಗಿ ಕಾಣುತ್ತಿದ್ದಳು. ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಆಕೆಯಲ್ಲಿ ಯಾವುದೇ ಎಚ್ಚರಿಕೆಯ ಲಕ್ಷಣಗಳು ಕಂಡುಬಂದಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಘಟನೆ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸಾವಿಗೆ ನಿಖರವಾದ ಕಾರಣಗಳ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ವೈದ್ಯಕೀಯ ಅಧಿಕಾರಿಗಳು ಅವರ ಹಠಾತ್ ಹೃದಯ ಸ್ತಂಭನಕ್ಕೆ ನಿಖರವಾದ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ. (ಏಜೆನ್ಸೀಸ್)