ನ್ಯೂಸ್

ಅಣ್ಣನನ್ನು ಬಾವಿಗೆಸೆದು ತಂಗಿಯನ್ನು ಹೊತ್ತೊಯ್ದು ತಡರಾತ್ರಿವರೆಗೂ ಅತ್ಯಾಚಾರ: 7ರಲ್ಲಿ ಮೂವರು ಬಾಲಕರು

ಬೆತುಲ್​(ಮಧ್ಯಪ್ರದೇಶ): ಹದಿನೆಂಟು ವರ್ಷದ ಯುವತಿಯ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಏಳು ಮಂದಿ ದುರುಳರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ತನ್ನ ಸಹೋದರನೊಂದಿಗೆ ಗ್ರಾಮಕ್ಕೆ ಮರಳುವಾಗ ಯುವತಿಯ ಮೇಲೆ ಕಾಮುಕರು ಎರಗಿದ್ದಾರೆ. ಅತ್ಯಾಚಾರಕ್ಕೂ ಮುನ್ನ ಸಹೋದರನನ್ನು ಬಾವಿಗೆ ಎಸೆದಿದ್ದಾರೆ. ಏಪ್ರಿಲ್​ 29-30ರ ಮಧ್ಯರಾತ್ರ ಘಟನೆ ನಡೆದಿದೆ. ಮೂವರು ಅಪ್ರಾಪ್ತರು ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಘಟನೆ ಕುರಿತು ವಿವರಣೆ ನೀಡಿರುವ ಕೊಟ್ವಾಲಿ ಪೊಲೀಸ್​ ಠಾಣಾ ಉಸ್ತುವಾರಿ ರಾಜೇಂದ್ರ ಧುರ್ವೆ, ಬುಧವಾರ ರಾತ್ರಿ ಯುವತಿಯು ತನ್ನ 21 ವರ್ಷದ ಸಹೋದರನೊಟ್ಟಿಗೆ ಬೈಕ್​ನಲ್ಲಿ ಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಏಳು ಮಂದಿ ಆರೋಪಿಗಳು ಬೈಕ್​ ತಡೆದಿದ್ದಾರೆ. ನಂತರ ಸಹೋದರನನ್ನು ರಾತ್ರಿ 8.30ರ ಸುಮಾರಿಗೆ ಪಕ್ಕದ ಬಾವಿಗೆ ಎಸೆದಿದ್ದಾರೆ. ಬಳಿಕ ಯುವತಿಯನ್ನು ಹೊತ್ತೊಯ್ದು ತಡರಾತ್ರಿ 2 ಗಂಟೆಯವರೆಗೂ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿಗಳ ಜಾಲದಿಂದ ಬಿಡುಗಡೆಗೊಂಡ ಯುವತಿ ನಂತರ ತನ್ನ ಸಹೋದರನನ್ನು ರಕ್ಷಿಸಿ ಬೆಳಗ್ಗೆ ತಮ್ಮ ಗ್ರಾಮವನ್ನು ತಲುಪಿ, ತದನಂತರ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಇಬ್ಬರು ಆರೋಪಿಗಳನ್ನು ಶುಭಮ್​ ಬೆಲೆ(22) ಮತ್ತು ಸಂದೀಪ್​ ಖಠಿಯಾ(23) ಎಂದು ಗುರುತಿಸಲಾಗಿದ್ದು, ಇವರೊಂದಿಗೆ ಮೂವರು ಅಪ್ರಾಪ್ತರನ್ನು ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಸನ್​ 376 (ಅತ್ಯಾಚಾರ), 365 (ಅಪಹರಣ) ಮತ್ತು 307 (ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)