ಕರೊನಾ ಸೋಂಕು ತಗುಲುವ ಭಯದಲ್ಲೇ ಓಡಾಡುತ್ತಿರುವ ಸಿಲಿಕಾನ್​ ಸಿಟಿ ಜನರನ್ನು ಬೆಚ್ಚಿಬೀಳಿಸಿದ ಐಸ್ಕ್ರೀಂ ಬಾಲ್​!

Ball
Published on

ಬೆಂಗಳೂರು: ಕರೊನಾ ಸೋಂಕು ತಗುಲುವ ಭಯದಲ್ಲೇ ಓಡಾಡುತ್ತಿರುವ ನಗರದ ಜನರನ್ನು ಗುರುವಾರ ಕೆಲ ಗಂಟೆ ಕಾಲ ಐಸ್ಕ್ರೀಂ ಬಾಲ್ ಬೆಚ್ಚಿಬೀಳಿಸಿತ್ತು! ಬಾಂಬ್ ಆಕಾರದ ವಸ್ತು ಕಂಡು ಭೀತಿ ಆವರಿಸಿತ್ತು. ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳಗಳು 2 ಗಂಟೆ ಪರಿಶೀಲಿಸಿ ನಡೆಸಿದ ನಂತರ ಅದೊಂದು ಐಸ್ಕ್ರೀಂ ಬಾಲ್ ಎಂಬುದು ಗೊತ್ತಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಳಗ್ಗೆ 10.30ರಲ್ಲಿ ಕತ್ರಿಗುಪ್ಪೆ ಸಮೀಪದ ಅಶೋಕನಗರ ಜಂಕ್ಷನ್​ನಲ್ಲಿ ಸ್ಥಳೀಯ ಜನರಿಗೆ ಅನುಮಾನಾಸ್ಪದ ವಸ್ತು ಕಂಡಿತ್ತು. ಕರೊನಾ ವೈರಸ್ ಸೋಂಕು ಹರಡುವ ಭೀತಿಯಲ್ಲಿದ್ದ ಜನರು ಬಾಂಬ್ ಮಾದರಿ ವಸ್ತು ಕಂಡು ಗಾಬರಿಗೊಂಡರು. ‘ನಮ್ಮ-100’ಗೆ ಬಂದ ಕರೆ ಮೇರೆಗೆ ಹನುಮಂತನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ಗುಂಪುಗೂಡಿದ್ದ ಜನರನ್ನು ಚದುರಿಸಿ ಇಡೀ ಪ್ರದೇಶವನ್ನು ಸುತ್ತುವರಿದು ಸುಪರ್ದಿಗೆ ಪಡೆದರು. ಅಷ್ಟೊತ್ತಿಗೆ ಸುತ್ತಲ ಪ್ರದೇಶದ ಜನರು ಜಮಾಯಿಸಿದ್ದರು.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಆ ಅನುಮಾನಾಸ್ಪದ ವಸ್ತುವನ್ನು ಅಲ್ಲಿಂದ ಸಮೀಪದ ಕೆಂಪೇಗೌಡ ಕ್ರೀಡಾಂಗಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಟ್ಟು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ಹಲವು ಹಂತದ ಪರಿಶೀಲನೆ ಬಳಿಕ ಐಸ್ ಕ್ರೀಂನ ಖಾಲಿ ಬಾಲ್​ನಲ್ಲಿ ಪಟಾಕಿ ತಯಾರಿಕೆಗೆ ಬಳಸುವ ಸಿಡಿಮದ್ದು ತುಂಬಿರುವುದು ಗೊತ್ತಾಗಿದೆ. ಲಾಕ್​ಡೌನ್ ಸಮಯದಲ್ಲಿ ಯಾವ ಉದ್ದೇಶಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಇಲ್ಲಿಗೆ ಇದನ್ನು ಎಸೆದವರು ಯಾರೆಂಬುದು ತಿಳಿದುಬಂದಿಲ್ಲ.ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಫ್​ಎಸ್​ಎಲ್ ಸಿಬ್ಬಂದಿಯೂ ಅನುಮಾನಾಸ್ಪದ ವಸ್ತುವಿನ ಮಾದರಿ ಪಡೆದಿದ್ದಾರೆ. ವರದಿ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಡಾ. ರೋಹಿಣಿ ಸಪೆಟ್ ಕಟೋಚ್ ತಿಳಿಸಿದ್ದಾರೆ.

ಕತ್ರಿಗುಪ್ಪೆ ಸಮೀಪದ ಅಶೋಕನಗರ ಜಂಕ್ಷನ್​ನಲ್ಲಿ ಸಿಕ್ಕಿರುವ ವಸ್ತು ಬಗ್ಗೆ ಭಯ ಪಡುವ ಅಗತ್ಯ ಇಲ್ಲ. ಶ್ವಾನ ದಳ, ಬಾಂಬ್ ಪತ್ತೆ ದಳ, ಎಫ್​ಎಸ್​ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. | ಭಾಸ್ಕರ್ ರಾವ್ ನಗರ ಪೊಲೀಸ್ ಆಯುಕ್ತ

ಈ ಹಿಂದೆಯೂ ಭೀತಿ

ಕಳೆದ ಅಕ್ಟೋಬರ್ 29ರಂದು ರಾಜಾಜಿನಗರ ಕೈಗಾರಿಕಾ ಪ್ರದೇಶದ 76ನೇ ಕ್ರಾಸ್​ನಲ್ಲಿ ರಸ್ತೆ ಬದಿ ವಾರಸುದಾರರು ಇಲ್ಲದ ಸೂಟ್​ಕೇಸ್ ಕಂಡುಬಂದು ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆ ಮುಂಭಾಗ ಪ್ರಸನ್ನ ಚಿತ್ರಮಂದಿರ ರಸ್ತೆಬದಿ ಸೂಟ್​ಕೇಸ್ ಪತ್ತೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ಆವರಿಸಿತ್ತು. ಎರಡೂ ಪ್ರಕರಣದಲ್ಲಿ ಸೂಟ್​ಕೇಸ್ ಪರಿಶೀಲನೆ ನಡೆಸಿದಾಗ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net