ನವದೆಹಲಿ: ಅಪ್ರಾಪ್ತ ವಯಸ್ಕರ ಗುಂಪೊಂದು ಯುವಕನನ್ನು ಜನನಿಬಿಡ ಪ್ರದೇಶದಲ್ಲಿ ಅಮಾನುಷವಾಗಿ ಥಳಿಸಿ ಇರಿದು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು 8ಮಂದಿ ಅಪ್ರಾಪ್ತ ವಯಸ್ಕರು ಹತ್ಯೆಗೆ ಬಳಸಲಾಗಿದ್ದ ಆಯುಧಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಚಂದನ್ ಚೌಧರಿ ವರ್ಷದ ಹಿಂದೆ ಮೆರವಣಿಗೆಯೊಂದರಲ್ಲಿ ನಡೆದಿದ್ದ ಜಗಳ ಸಂಬಂಧ ಯುವಕನನ್ನು ಹತ್ಯೆ ಮಾಡಲಾಗಿದೆ. ಮಜಿದಾ ಆಸ್ಪತ್ರೆ ಸಿಬ್ಬಂದಿಯೊಬ್ಬರು ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ದಾಖಲಾಗಿರುವ ಬಗ್ಗೆ ನಮಗೆ ಮಾಹಿತಿ ನೀಡಿದರು.
ಅಧಿಕಾರಿಗಳು ಆಸ್ಪತ್ರೆ ತಲುಪುವಷ್ಟರಲ್ಲೇ ಆತ ಚಿಕಿತ್ಸೆ ಫಲಕಾರಿಯಾಗದೆ ಮರತಪಟ್ಟಿದ್ದ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ 8ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಡಿಸಿಪಿ ಚಂದನ್ ಚೌಧರಿ ತಿಳಿಸಿದ್ದಾರೆ.