ಪಡಿತರ ಅಕ್ಕಿ ವಶ 
ನ್ಯೂಸ್

ರಾಜ್ಯಾದ್ಯಂತ 3 ತಿಂಗಳಲ್ಲಿ 17.78 ಲಕ್ಷ ಕೆಜಿ ಪಡಿತರ ಅಕ್ಕಿ ವಶ - ration rice seized

ರಾಜ್ಯದ ಇತರ ಜಿಲ್ಲೆಗಳಗಿಂತ ಬೆಳಗಾವಿಯಲ್ಲೇ ಅತಿ ಹೆಚ್ಚು ಅಂದರೆ 5 ಲಕ್ಷ ಕೆಜಿಗೂ ಅಧಿಕ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಕೋಲಾರದಲ್ಲಿ 3.5 ಲಕ್ಷ ಕೆಜಿ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ತಲಾ ಒಂದು ಲಕ್ಷಕ್ಕೂ ಅಧಿಕ ಕೆಜಿ ಅಕ್ಕಿ ಜಪ್ತಿ ಮಾಡಲಾಗಿದೆ.

ಬೆಂಗಳೂರು: ಕಳೆದ 3 ತಿಂಗಳಲ್ಲಿ ರಾಜ್ಯಾದ್ಯಂತ ಅಕ್ರಮವಾಗಿ ಸಾಗಣೆ, ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ 17.78 ಲಕ್ಷ ಕೆಜಿ ಪಡಿತರ ಅಕ್ಕಿ ಸೇರಿ ಇತರೆ ಪದಾರ್ಥಗಳನ್ನು ಆಹಾರ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಸಚಿವ ರಿಜ್ವಾನ್ ಅರ್ಷದ್ ನಿರ್ದೇಶನದ ಮೇರೆಗೆ ಆ.1ರಿಂದ ಅಧಿಕಾರಿಗಳು ನಿರಂತರವಾಗಿ ಪಡಿತರ ಸಾಗಣೆ ವಾಹನಗಳ ತಪಾಸಣೆ ಹಾಗೂ ಖಾಸಗಿ ಗೋಡೌನ್‌ಗಳ ಮೇಲೆ ದಾಳಿ ನಡೆಸಿ ಅಕ್ಕಿ, ಗೋಧಿ ಮತ್ತು ರಾಗಿ ಸೇರಿ ಇತರೆ ಬೇಳೆಕಾಳು ಜಪ್ತಿ ಮಾಡಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಗಿಂತ ಬೆಳಗಾವಿಯಲ್ಲೇ ಅತಿ ಹೆಚ್ಚು ಅಂದರೆ 5 ಲಕ್ಷ ಕೆಜಿಗೂ ಅಧಿಕ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಕೋಲಾರದಲ್ಲಿ 3.5 ಲಕ್ಷ ಕೆಜಿ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ತಲಾ ಒಂದು ಲಕ್ಷಕ್ಕೂ ಅಧಿಕ ಕೆಜಿ ಅಕ್ಕಿ ಜಪ್ತಿ ಮಾಡಲಾಗಿದೆ.

ದಾಳಿ, ತಪಾಸಣೆಗೆ ಸಂಬಂಧಿಸಿದಂತೆ ಒಟ್ಟು 238 ಎಫ್​​ಐಆರ್​​​ ದಾಖಲಿಸಿ, 215 ಮಂದಿ ಬಂಧಿಸಲಾಗಿದೆ. ಪಡಿತರ ಕಳ್ಳ ಸಾಗಣೆಗೆ ಬಳಸಲಾಗುತ್ತಿದ್ದ 156 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 3 ತಿಂಗಳಿನಲ್ಲಿ 14,250 ಲೀಟರ್ ಪೆಟ್ರೋಲ್ ಹಾಗೂ 1,492 ಗ್ಯಾಸ್ ಸಿಲಿಂಡರ್ ಜಪ್ತಿ ಮಾಡಲಾಗಿದೆ.

ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಬಡವರು ತೊಂದರೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಡ್‌ದಾರರಿಗೆ ಮೀಸಲಿರುವ ಅಕ್ಕಿಯನ್ನು ದಂಧೆಕೋರರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ. ನಮ್ಮ ಸರ್ಕಾರ ಇದಕ್ಕೆ ಆಸ್ಪದ ಕೊಡುವುದಿಲ್ಲ. ಕೆಲವು ದಿನಗಳಿಂದ ಅಕ್ಕಿ ಬೆಲೆ ಏರಿಕೆಯಾಗುತ್ತಿದ್ದು,ಕಳ್ಳಸಂತೆಯಲ್ಲಿ ಅಕ್ರಮವಾಗಿ ಅಕ್ಕಿ ಮಾರಾಟ ಮಾಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಕಾಳದಂಧೆಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ರಿಜ್ವಾನ್ ಅರ್ಷದ್, ಆಹಾರ ಸಚಿವ.