ನ್ಯೂಸ್

ಪ್ರವಾಹದಿಂದ ಮನೆಗಳಿಗೆ ಆದ ನಷ್ಟ 17 ಸಾವಿರ ಕೋಟಿ ರೂಪಾಯಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯವನ್ನು ಕಳೆದ ನಾಲ್ಕು ವರ್ಷಗಳಿಂದ ಕಾಡಿದ ಸತತ ಪ್ರವಾಹದಿಂದ ಮನೆಗಳಿಗೆ ಆಗಿರುವ ಹಾನಿಯಿಂದ ಆಗಿರುವ ನಷ್ಟದ ಮೊತ್ತ 17 ಸಾವಿರ ಕೋಟಿ ರೂ.ಗೂ ಮೀರಿದ್ದು, ಮನೆ ಕಳೆದುಕೊಂಡಿರುವವರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ 2019ರಿಂದ ಸತತವಾಗಿ ಮಳೆ ಬರುತ್ತಲೇ. ರಾಜ್ಯ ಸರ್ಕಾರವೇ ಕೇಂದ್ರದ ನೆರವಿಗಾಗಿ ಕಾಲಕಾಲಕ್ಕೆ ಸಲ್ಲಿಸಿರುವ ಮನವಿಗಳಲ್ಲಿಯೇ 3,40,543 ಮನೆ ಹಾಳಾಗಿವೆ ಎಂಬ ಮಾಹಿತಿ ನೀಡಿದೆ. ಪೂರ್ಣ ಬಿದ್ದು ಹೋಗಿರುವ ಮನೆಗಳಿಗೆ 5 ಲಕ್ಷ ರೂ.ತನಕ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದ್ದು ಮಾತ್ರವಲ್ಲದೆ, ಎರಡು ವರ್ಷ ಹೇಳಿದಂತೆ ಹಣ ನೀಡಿದೆ. ಈಗ 5 ಲಕ್ಷ ರೂ.ಗಳನ್ನು ನೀಡುವುದಕ್ಕೆ ಷರತ್ತು ವಿಧಿಸಿದೆ.

ಎಷ್ಟು ನಷ್ಟ?: ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಗಳ ಪ್ರಕಾರ 3.40 ಲಕ್ಷ ಮನೆಗಳು ತೀವ್ರ ಹಾನಿಗೊಳಗಾಗಿವೆ. ಸರ್ಕಾರದ ಲೆಕ್ಕದ ಪ್ರಕಾರವೇ ಜನರಿಗೆ ಆಗಿರುವ ಹಾನಿಯ ಪ್ರಮಾಣ 17 ಸಾವಿರ ಕೋಟಿ ರೂ.ಗಳನ್ನು ಮೀರುತ್ತದೆ. ಸರ್ಕಾರವೇ ಕೇಂದ್ರಕ್ಕೆ ನೀಡಿರುವ ಮನವಿಯಲ್ಲಿ ಈ ವಿಷಯ ತಿಳಿಸಿದೆ. ಕೇಂದ್ರ ಸರ್ಕಾರದ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ನಿಧಿಯ ನಿಯಮಗಳ ಪ್ರಕಾರ 5 ಲಕ್ಷ ರೂ. ತನಕ ಪರಿಹಾರ ನೀಡುವಂತಿಲ್ಲ. ಆದರೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡುವ ಯೋಜನೆ ರೂಪಿಸಿ ಸಂತ್ರಸ್ಥರ ನೆರವಿಗೆ ಬಂದರು. ಆದರೆ ಕಬ್ಬಿಣ, ಮರಳು, ಸಿಮೆಂಟ್, ಕೂಲಿಯ ದರ ದುಪ್ಪಟ್ಟು ಆಗಿರುವುದರಿಂದ 5 ಲಕ್ಷ ರೂ.ಗಳಲ್ಲಿ ಮನೆ ನಿರ್ಮಾಣ ಸಾಧ್ಯವೇ ಇಲ್ಲವೆಂಬ ಸ್ಥಿತಿ ಇದೆ. ಪೂರ್ಣ ಬಿದ್ದು ಹೋಗಿರುವ ಮನೆಗಳ ಜನ ಗ್ರಾಮೀಣ ಭಾಗದಲ್ಲಿ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ಇನ್ನೂ ಪರಿಹಾರ ಬಂದಿಲ್ಲ: ಪ್ರಸಕ್ತ ವರ್ಷ ಆಗಸ್ಟ್​ನಲ್ಲಿ 24408 ಮನೆಗಳು ಹಾನಿಯಾಗಿವೆ. ಆದರೆ ಪರಿಹಾರ ನೀಡುವಲ್ಲಿ ಷರತ್ತುಗಳನ್ನು ರೂಪಿಸಿದೆ. ಒಂದೆಡೆ ಕೇಂದ್ರಕ್ಕೆ ಮನವಿ ನೀಡಲಾಗಿದೆ. ಅಲ್ಲಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರ ಮನೆಗಳ ಹಾನಿಗೆ ಅರ್ಜಿ ಸಲ್ಲಿಸುವುದಕ್ಕೆ ಪೋಟೋ ಸೇರಿ ಕೆಲವೊಂದು ದಾಖಲೆಗಳನ್ನು ಸಲ್ಲಿಸಬೇಕೆಂದು ಸ್ಥಳೀಯ ಸರ್ಕಾರಿ ಸಿಬ್ಬಂದಿಗೆ ಸೂಚನೆ ನೀಡಿದೆ. ಆದ್ದರಿಂದ ಇನ್ನೂ ಯಾವುದೇ ಮನೆಗೆ ಪರಿಹಾರ ತಲುಪಿಲ್ಲ.

ಪಡೆದ ಮನೆಗೆ ಮತ್ತೆ ಪರಿಹಾರ: ಕೆಲವು ಜಿಲ್ಲೆಗಳಲ್ಲಿ 2019 ಮತ್ತು 2020ರಲ್ಲೂ ಪರಿಹಾರ ಪಡೆದು ಮತ್ತೆ ಪರಿಹಾರ ಪಡೆದಿರುವ ದೂರುಗಳು ಸರ್ಕಾರಕ್ಕೆ ಬಂದಿವೆ. ಆದ್ದರಿಂದಲೇ ಸರ್ಕಾರ 2021ರಿಂದ ಕೆಲವೊಂದು ಕಠಿಣ ಷರತ್ತು ರೂಪಿಸಿದೆ. ಇದರಿಂದ ಬಿಲ್ ಸಲ್ಲಿಕೆಯಲ್ಲಿ ನಕಲಿಯಾಗುವುದು ತಪು್ಪತ್ತದೆ. ಹಾಗಾಗಿ ಬಿಲ್ ಪಾವತಿ ತಡವಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಸಮಸ್ಯೆಗಳೇನು?

  • ತೀವ್ರ ಮನೆಗಳಿಗೆ ಆಗಿರುವ ಹಾನಿಯಿಂದ ವಾಸಕ್ಕೆ ಪರದಾಡುವ ಸ್ಥಿತಿ ಗ್ರಾಮೀಣ ಭಾಗದಲ್ಲಿ ಈಗಲೂ ಇದೆ.
  • ಬಾಡಿಗೆ ಮನೆಗಳಿಗೆ ಹುಡುಕಾಟ ಸಹ ನಡೆದಿದೆ.
  • ಮನೆಗಳನ್ನು ಕಟ್ಟಿಕೊಳ್ಳಲು ಈ ದುಬಾರಿ ದಿನಗಳಲ್ಲಿ ಸಾಲ ಮಾಡುವ ಸ್ಥಿತಿ ಎದುರಾಗಿದೆ.
  • ಮಳೆಯಿಂದ ತೀವ್ರ ತೇವಾಂಶ ಇರುವುದರಿಂದ ಮನೆಗಳು ಬಿರುಕುಬಿಡಲಾರಂಭಿಸಿವೆ.

ಹಾನಿಯ ಲೆಕ್ಕ ಹೀಗಿದೆ...

  • ಪರಿಹಾರ ನೀಡಲು ಕನಿಷ್ಠ ಶೇ.10 ಹಾನಿ ಸಂಭವಿಸಿರಬೇಕು.
  • ಶೇ.10-25 ರವರೆಗೆ ಹಾನಿಯಾಗಿದ್ದರೆ 50 ಸಾವಿರ ರೂ ನೀಡಬೇಕೆಂದು ನಿಯಮ.
  • ಪೂರ್ಣ ಹಾನಿಯಾಗಿದ್ದರೆ ಮಾತ್ರ 5 ಲಕ್ಷ ರೂ. ತನಕ ಪರಿಹಾರ ನೀಡಲಾಗುತ್ತದೆ.