ಮಾಸ್ಕೋ: ಚಿಕ್ಕ ಮಗುವಿನಷ್ಟು ತೂಕವಿರುವ ಬೆಕ್ಕೊಂದು ಇತ್ತೀಚೆಗೆ ರಷ್ಯಾದಲ್ಲಿ ಪೆರ್ಮ್‌ನಲ್ಲಿರುವ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದೆ. ತಿನ್ನುವುದರ ಜತೆಗೆ ಡ್ರಿಂಕ್ ಮಾಡಲು ಇಚ್ಛಿಸುವ ಈ ಬೆಕ್ಕಿನ ಹೆಸರು ಕ್ರೋಶಿಕ್. 17 ಕೆ.ಜಿ. ತೂಕವಿರುವ ಈ ಬೆಕ್ಕು ಮಾನ್ಸ್ಟರ್ ಕ್ಯಾಟ್ ಎಂದೇ ಫೇಮಸ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಬೆಕ್ಕಿನ ಫೋಟೋ ಮತ್ತು ವಿಡಿಯೋಗಳು ನೋಡುಗರ ಪ್ರೀತಿಯನ್ನು ಪಡೆದುಕೊಂಡಿದೆ.
ಇದನ್ನು ಓದಿ: ಶಾಲಾ ಸಮವಸ್ತ್ರದಲ್ಲಿದ್ದ ಹುಡುಗಿಯರ ಖತರ್ನಾಕ್ ಕೈಚಳಕ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?
ಕ್ರೋಶಿಕ್ ತನ್ನ ಅತಿಯಾದ ಭಾರದಿಂದ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ನೆಲಮಾಳಿಗೆಯಲ್ಲಿ ಸಿಕ್ಕಿದೆ. ಸದ್ಯ ಬೆಕ್ಕಿನ ಆಹಾರ ಮತ್ತು ಚಿಕಿತ್ಸೆಯನ್ನು ಎನ್ಜಿಒ ನೋಡಿಕೊಳ್ಳುತ್ತಿದೆ. ಚಿಕಿತ್ಸೆ ನೀಡುವುದರ ಮೂಲಕ ಬೆಕ್ಕಿನ ಕಾಲುಗಳನ್ನ ಚಲಿಸುವಂತೆ ಮಾಡಿದ್ದಾರೆ. ನೆಲದ ಮೇಲೆ ತೆವಳುತ್ತಿರುವುದನ್ನು ನೋಡಿದ ರೋಗಿಯೊಬ್ಬರು ಬೆಕ್ಕಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಅದನ್ನು ಅಲ್ಲಿಂದ ಕರೆತಂದ ಎನ್ಜಿಒ ಆರೈಕೆ ಮಾಡುತ್ತಿದೆ.
ಕ್ರೋಶಿಕ್ ಎಂದರೆ ರಷ್ಯನ್ ಭಾಷೆಯಲ್ಲಿ "ಕ್ರಂಬ್ಸ್" ಎಂದರ್ಥ. ಕಂದು ಮತ್ತು ಬಿಳಿ ಬಣ್ಣದಲ್ಲಿರುವ ಈ ಬೆಕ್ಕು ಹಲವು ವರ್ಷಗಳಿಂದ ಇಲ್ಲೇ ನೆಲೆಸಿದ್ದು, ಯಾರೋ ಆಕೆಯನ್ನು ಇಲ್ಲಿಯೇ ಬಿಟ್ಟು ಹೋಗಿರಬಹುದು ಎಂದು ಊಹಿಸಲಾಗಿದೆ. ಸದ್ಯ ಪಶುವೈದ್ಯರು ಅದನ್ನು ಪರೀಕ್ಷಿಸುತ್ತಿದ್ದಾರೆ. ಬೆಕ್ಕಿನ ತೂಕವು ಅದರ ಹೃದಯ ಮತ್ತು ದೇಹದ ಇತರ ಅಂಗಗಳ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದು ವರದಿ ಬಂದ ಬಳಿಕ ತಿಳಿಯಬೇಕಿದೆ ಎಂದು ಎನ್ಜಿಒದಲ್ಲಿನ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಮಾನ್ಸ್ಟರ್ ಕ್ಯಾಟ್ಗೆ ಆಲ್ಕೋಹಾಲ್, ಜ್ಯೂಸ್, ಮಾಂಸ, ಸೂಪ್, ಬ್ರೇಡ್ ಅಂದ್ರೆ ಬಹಳ ಇಷ್ಟವಂತೆ. ಇತ್ತೀಚೆಗೆ ಈ ಬೆಕ್ಕಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಅದರಲ್ಲಿ ಕ್ರೋಶಿಕ್ ಕಾಲುಗಳಿಗೆ ಮತ್ತೆ ಶಕ್ತಿ ಮರಳುತ್ತಿದೆ ಎನ್ನುವುದನ್ನು ಕಾಣಬಹುದಾಗಿದೆ. ನೀರಿನ ಟ್ರೆಡ್ಮಿಲ್ನಲ್ಲಿ ಬೆಕ್ಕು ನಡೆಯುತ್ತಿರುವುದನ್ನು ಕಾಣಬಗುದಾಗಿದೆ.
ವೈರಲ್ ವಿಡಿಯೋ ನೋಡಿ ಈ ಬೆಕ್ಕಿಗೆ ಜನರು ತುಂಬಾ ಪ್ರೀತಿ ನೀಡುತ್ತಿದ್ದಾರೆ. ಅದರ ಆರೋಗ್ಯದ ಬಗ್ಗೆ ಚಿಂತಿಸುತ್ತಿರುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ವಿಶ್ವದ ಐದು ಅತ್ಯಂತ ದಪ್ಪ ಬೆಕ್ಕುಗಳಲ್ಲಿ ಒಂದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)