ನ್ಯೂಸ್

ರಾಜ್ಯ ಲೋಕಾಯುಕ್ತ ಈಗ ಮತ್ತಷ್ಟು ಶಕ್ತಿಯುತ; ಒಂದೇ ದಿನ 15 ಡಿವೈಎಸ್​ಪಿಗಳ ನೇಮಕ..

ಬೆಂಗಳೂರು: ಇತ್ತೀಚೆಗಷ್ಟೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದಾದ ಬೆನ್ನಲ್ಲೇ ಎಸಿಬಿಗೆ ಮಂಜೂರಾಗಿದ್ದ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಬಳಸಿಕೊಂಡು ಹೊಸದಾಗಿ 9 ಉಪ ವಿಭಾಗ ಮತ್ತು 4 ಸಂಚಾರ ಠಾಣೆಗಳನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿತ್ತು.

ಆ ಪೈಕಿ ಎಸಿಬಿ ಮಂಜೂರಾಗಿದ್ದ 10 ಎಸ್‌ಪಿ, 35 ಡಿವೈಎಸ್​ಪಿ, 76 ಇನ್‌ಸ್ಪೆಕ್ಟರ್ ಸೇರಿದಂತೆ 445 ಹುದ್ದೆಗಳ ಪೈಕಿ ಲೋಕಾಯುಕ್ತ ಸಂಸ್ಥೆಗೆ 224 ಹುದ್ದೆಗಳನ್ನು ವರ್ಗಾಯಿಸಿ, ಉಳಿದ 221 ಹುದ್ದೆಗಳನ್ನು ಪೊಲೀಸ್ ಇಲಾಖೆ ತನ್ನ ವಶದಲ್ಲಿ ಇರಿಸಿಕೊಂಡಿತ್ತು.

ಇದೀಗ ಅದರ ಮುಂದುವರಿದ ಭಾಗ ಎಂಬಂತೆ ಲೋಕಾಯುಕ್ತಕ್ಕೆ ಒಂದೇ ದಿನದಲ್ಲಿ 15 ಡಿವೈಎಸ್​ಪಿಗಳನ್ನು ನೇಮಕ ಮಾಡಲಾಗಿದೆ. ಅರ್ಥಾತ್, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಹಂತದ ವರ್ಗಾವಣೆ ನಡೆದಿದ್ದು, ಎಸಿಬಿಯಲ್ಲಿದ್ದ ಬಹಳಷ್ಟು ಡಿವೈಎಸ್​ಪಿಗಳು ಸೇರಿದಂತೆ ಒಟ್ಟು 17 ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಆ ಪೈಕಿ 15 ಡಿವೈಎಸ್​ಪಿಗಳನ್ನು ಲೋಕಾಯಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಲೋಕಾಯುಕ್ತಕ್ಕೆ ಹೊಸದಾಗಿ 15 ಡಿವೈಎಸ್​ಪಿಗಳು ಸಿಕ್ಕಂತಾಗಿದ್ದು, ಅದನ್ನು ಮತ್ತಷ್ಟು ಬಲಗೊಳಿಸಿದಂತಾಗಿದೆ.